Breaking News

ರಾಜ್ಯದೆಲ್ಲೆಡೆ ಟೊಮೆಟೊ ದರಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ.

Spread the love

ಬೆಂಗಳೂರು : ಸುಮಾರು ಒಂದೂವರೆ, ಎರಡು ತಿಂಗಳ ಕಾಲ ಕೆ.ಜಿಗೆ 100 ರಿಂದ 150 ರೂಪಾಯಿಯಿದ್ದ ಟೊಮೆಟೊ ಬೆಲೆ ಇದೀಗ 20 ರೂ.ಗೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

 

ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೊ ಪೂರೈಕೆಯಾಗುತ್ತಿದೆ. ಬೆಂಗಳೂರು ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೊ ಪ್ರಮಾಣವೂ ಹೆಚ್ಚಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ 250 ರಿಂದ 400 ರೂ, ಹೈಬ್ರಿಡ್ ಟೊಮೆಟೊ 250 ರಿಂದ 450 ರೂ. ಗೆ ಇಳಿದಿದೆ.

ನಗರದ ಕಲಾಸಿಪಾಳ್ಯ, ಬಿನ್ನಿಮಿಲ್, ಕೆ.ಆರ್.ಮಾರುಕಟ್ಟೆಗಳಿಗೆ ಈ ಹಿಂದೆ ದಿನಕ್ಕೆ ಕೇವಲ 250 ಕ್ವಿಂಟಲ್ ಬರುತ್ತಿದ್ದ ಟೊಮೆಟೊ ಇದೀಗ ಬೇಡಿಕೆಗೆ ಅನುಸಾರವಾಗಿ ಪೂರೈಕೆ ಆಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ 20 ಕೆ.ಜಿ ಬಾಕ್ಸ್‌ಗೆ 600 ರಿಂದ 700 ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಮಲ್ಲೇಶ್ವರ, ಯಶವಂತಪುರ, ಜಯನಗರ ಸೇರಿದಂತೆ ಬಡಾವಣೆಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ. ಕೆ.ಜಿಗೆ 20 ರಿಂದ 30 ರೂ.ವರೆಗೆ ಮಾರಾಟವಾಗುತ್ತಿದೆ.

ಟೊಮೆಟೊ ಬೆಲೆ ನಗರದಲ್ಲಿ ಕೆ.ಜಿಗೆ ಗರಿಷ್ಠ 100 ರಿಂದ 160 ರವರೆಗೆ ತಲುಪಿದ್ದಾಗ ಬಹುತೇಕರು ಖರೀದಿಸುವುದನ್ನು ಬಿಟ್ಟಿದ್ದರು. ಇಲ್ಲವೇ, ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿದ್ದರು. ಅಡುಗೆಯಲ್ಲಿ ಹುಣಸೆ ಹಣ್ಣಿನಂಥ ಪರ್ಯಾಯಕ್ಕೆ ಮೊರೆ ಹೋಗುತ್ತಿದ್ದರು. ಆದರೆ, ಇದೀಗ ಸಹಜ ಬೆಲೆಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಸಂತಸಗೊಂಡಿದ್ದಾರೆ. ಇದೀಗ ಟೊಮೆಟೊ ಖರೀದಿ ಜೋರಾಗುತ್ತಿದ್ದು, ಅಡುಗೆ ಮನೆಗಳಲ್ಲಿ ಟೊಮೆಟೊ ಕಾಣುತ್ತಿದೆ.

ಸಾಮಾನ್ಯ ಜನರು ಮಾತ್ರವಲ್ಲ, ಟೊಮೆಟೋ ದುಬಾರಿಯಾದಾಗ ಹೋಟೆಲ್‌ಗಳೂ ಕೂಡ ಖಾದ್ಯಗಳಲ್ಲಿ ಟೊಮೆಟೊ ಬಳಕೆ ಬಿಟ್ಟಿದ್ದವು. ರಸ್ತೆಬದಿಯ ಮಸಾಲಪುರಿ ಅಂಗಡಿಗಳಿಂದ ಹಿಡಿದು ಹೋಟೆಲ್‌ ಊಟ, ತಿಂಡಿಗಳಲ್ಲಿ ಟೊಮೆಟೊ ಮಾಯವಾಗಿತ್ತು. ಸಲಾಡ್‌ನಲ್ಲೂ ಟೊಮೆಟೊ ಕಾಣುತ್ತಿರಲಿಲ್ಲ. ಆದರೀಗ ಹೋಟೆಲ್‌ ತಿನಿಸುಗಳಲ್ಲಿ ಟೊಮೆಟೋ ಮತ್ತೆ ಹಾಜರಾಗಿದೆ. ಗ್ರಾಹಕರೂ ಖುಷಿಯಾಗಿದ್ದಾರೆ.

ಈರುಳ್ಳಿ ಬೆಲೆ ಏರಿಕೆ ಸಾಧ್ಯತೆ: ಇತ್ತೀಚಿಗೆ ಕೃಷಿ ವಿಶ್ಲೇಷಕರು, ಟೊಮೆಟೊ ಬೆಲೆ ಶತಕ ಬಾರಿಸಿದ ಬಳಿಕ ಈಗ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಮುಂದಿನ ತಿಂಗಳ ಹೊತ್ತಿಗೆ ಈರುಳ್ಳಿ ಬೆಲೆ ದುಪ್ಟಟ್ಟಾಗಿ ಕೆಜಿಗೆ 55 ರಿಂದ 60 ರೂಪಾಯಿ ತಲುಪಬಹುದು ಎಂದು ವಿಶ್ಲೇಷಿಸಲಾಗಿತ್ತು. ಭಾರತದಲ್ಲಿ ಅಪಾರ ಪ್ರಮಾಣದ ಈರುಳ್ಳಿಯ ಸಂಗ್ರಹ ಇದ್ದರೂ, ಈ ವರ್ಷ ಅತಿಯಾದ ಬೇಸಿಗೆಯ ಶಾಖದಿಂದಾಗಿ ಬಹಳಷ್ಟು ಪ್ರಮಾಣದ ಈರುಳ್ಳಿಯ ಗುಣಮಟ್ಟ ಕಳಪೆಯಾಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಈರುಳ್ಳಿಯ ಬೆಲೆ ಹೆಚ್ಚಳವಾಗಬಹುದು ಎಂದು ತಜ್ಞರು ಮಾಹಿತಿ ನೀಡಿದ್ದರು.

ದೇಶದ ಈರುಳ್ಳಿ ಉತ್ಪಾದನೆಯಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಪಾಲು ಹೊಂದಿರುವ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಯ ನಾಟಿ ವಿಳಂಬವಾಗಿರುವುದು ಕೂಡ ಬೆಲೆ ಏರಿಕೆಗೆ ಒಂದು ಕಾರಣವಾಗಬಹುದು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ