ಬೆಂಗಳೂರು, ಮೇ 21-ನೆಲಮಂಗಲದ ಮಾಚೋಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸಿಸಿಬಿಯ ಓಸಿಡಬ್ಲ್ಯು ತಂಡ ಬಂಧಿಸಿ ಮಾದನಾಯ್ಕನಹಳ್ಳಿ ಪೊಲೀಸರಿಗೆ ಒಪ್ಪಿಸಿದೆ.
ಖಾಸಗಿ ಚಾನೆಲ್‍ನ ವ್ಯವಸ್ಥಾಪಕ ನಿರ್ದೇಶಕ ಮೋಹನ್‍ಕುಮಾರ್ (28) ಬಂಧಿತ ಆರೋಪಿ. ಮಾದನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019 ಏಪ್ರಿಲ್ 15 ರಂದು ಗ್ರಾ.ಪಂ. ಸದಸ್ಯ ಲಕ್ಷ್ಮೀನಾರಾಯಣನನ್ನು ನಾಲ್ಕೈದು ಮಂದಿಯ ಗುಂಪು ಭೀಕರವಾಗಿ ಕೊಲೆ ಮಾಡಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು. ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್‍ಕುಮಾರ್ ಸಿಸಿಬಿಯ ಓಸಿಡಬ್ಲ್ಯು ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.
ಸಿಸಿಬಿ ಪೊಲೀಸರು ಮುಂದಿನ ವಿಚಾರಣೆಗಾಗಿ ಮಾದನಾಯ್ಕನಹಳ್ಳಿ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.
ಅಂಗನವಾಡಿ ಪಕ್ಕದ ಸರ್ಕಾರಿ ಜಾಗಕ್ಕೆ ನಕಲಿ ಹಕ್ಕು ಪತ್ರ ಮಾಡಿಕೊಂಡು ಮನೆಕಟ್ಟುಕೊಳ್ಳುತ್ತಿದ್ದೀಯ ಎಂದು ಸ್ಥಳೀಯ ನಿವಾಸಿ ಹರೀಶ್ ಎಂಬಾತನೊಂದಿಗೆ ಲಕ್ಷ್ಮೀನಾರಾಯಣ್ ತಕರಾರು ಮಾಡಿಕೊಂಡಿದ್ದರು.
ಇದೇ ಕೋಪಕ್ಕೆ ಹರೀಶ್ ತನ್ನ ಸಹಚರರಾದ ಮೋಹನ್‍ಕುಮಾರ್ ಮತ್ತಿತರರನ್ನು ಸೇರಿಸಿಕೊಂಡು ಏಪ್ರಿಲ್ 15ರಂದು ಹೊಂಚು ಹಾಕಿ ಲಕ್ಷ್ಮೀನಾರಾಯಣನನ್ನು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದು, ಇದೀಗ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ.ಆರೋಪಿ ಮೋಹನ್‍ಕುಮಾರ್ ಜೆಟಿವಿ ಮತ್ತು ಟಿವಿ6 ಚಾನೆಲ್‍ನ ವ್ಯವಸ್ಥಾಪಕ ನಿರ್ದೇಶಕನಾಗಿದ್ದು ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಕ್ಕೂ ಗುರಿಯಾಗಿದ್ದ ಎನ್ನಲಾಗಿದೆ.
Laxmi News 24×7