ಬೆಂಗಳೂರು: ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರಾ? ಎಂಬ ಬಲವಾದ ಅನುಮಾನ ಮೂಡಿಸಿದೆ.
ಡಿಸಿಎಂ ಮಾತನಾಡುತ್ತಾ, “ನನ್ನದು ಮತ್ತು ಎಸ್.ಟಿ. ಸೋಮಶೇಖರ್ ಅವರದು 35 ವರ್ಷಗಳ ಸ್ನೇಹ. ಅವರನ್ನು ನೀರು, ಗೊಬ್ಬರ ಹಾಕಿ ರಾಜಕೀಯವಾಗಿ ಬೆಳೆಸಿದ್ದೇವೆ, ಹಣ್ಣು ಬಿಟ್ಟಿದೆ. ಅದನ್ನು ಬೇರೆಯವರು ಕಿತ್ಕೊಂಡು ತಿನ್ನೋದಕ್ಕೆ ಬಿಡಬಾರದು ಅನ್ನೋದು ನನ್ನ ಭಾವನೆ” ಎಂದು ಸೂಚ್ಯವಾಗಿ ತಿಳಿಸಿದರು.
‘ಕಾಂಗ್ರೆಸ್ಗೆ ಬೆಂಬಲ ನೀಡಿ’: “ಸೋಮಶೇಖರ್ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ನೀವು ಅವರು ಕೂತು ತೀರ್ಮಾನ ಮಾಡಿಕೊಳ್ಳಿ. ನಮ್ಮ ಸರ್ಕಾರ ಅಂತೂ 5 ವರ್ಷ ಇರುತ್ತದೆ. ನೀವು ಪ್ರಜ್ಞಾವಂತರಿದ್ದೀರಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೀರಿ ಅಂತ ಗೊತ್ತಿದೆ. ನಾನು ಕನಕಪುರಕ್ಕೆ ಹೋಗಲು ಆಗಿಲ್ಲ. ಆದರೆ ಈ ಸೋಮಶೇಖರ್ ಎರಡು ಬಾರಿ ನನ್ನನ್ನು ನಿಮ್ಮ ಕ್ಷೇತ್ರಕ್ಕೆ ಎಳೆದುಕೊಂಡು ಬಂದಿದ್ದಾರೆ. ನಿಮ್ಮ ಸಮಸ್ಯೆ ಬಗ್ಗೆ ನಮಗೂ ಕಾಳಜಿ ಇದೆ. ಈ ಬಾರಿಯ ಚುನಾವಣೆಯಲ್ಲಿ ನೀವು ಕಾಂಗ್ರೆಸ್ಗೆ ಬೆಂಬಲ ನೀಡಲಿಲ್ಲ. ಮುಂದಿನ ಚುನಾವಣೆಯಲ್ಲಿ ನೀವು ಕಾಂಗ್ರೆಸ್ಗೆ ಬೆಂಬಲ ನೀಡಬೇಕು” ಎಂದು ಜನತೆಗೆ ಡಿಕೆಶಿ ಮನವಿ ಮಾಡಿದರು.
ಜನಸ್ಪಂದನ ಕಾರ್ಯಕ್ರಮ
‘ರಾಜಕೀಯ ಪಕ್ಕಕ್ಕಿಟ್ಟು ಸಮಸ್ಯೆ ಪರಿಹಾರ’: “ಶಾಸಕ ಸೋಮಶೇಖರ್ ಅವರು ಎರಡು ಮೂರು ಬಾರಿ ನನ್ನ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಈಗ ಯಶವಂತಪುರ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲೆಂದು ಸರ್ಕಾರದ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದೇನೆ. ಕನಕಪುರ ರಸ್ತೆಗೆ ಬೇರೆ ಸ್ವರೂಪ ನೀಡಲು ನೀವು ಹೋರಾಟ ಮಾಡಿಕೊಂಡು ಬಂದಿದ್ದೀರಿ. ನೀವು ಸ್ವಾರ್ಥಕ್ಕೆ ಏನೂ ಕೇಳಿಲ್ಲ, ಸಮಸ್ಯೆಗೆ ಪರಿಹಾರ ಕೇಳಿದ್ದೀರಿ. ಆದರೆ, ಸೋಮಶೇಖರ್ ಈ ಮೊದಲೇ ನನ್ನ ಗಮನಕ್ಕೆ ತಂದಿದ್ದಾರೆ. ರಾಜಕೀಯ ಪಕ್ಕಕ್ಕಿಟ್ಟು ನಿಮ್ಮ ಸಮಸ್ಯೆಗೆ ಕಿವಿಗೊಡುತ್ತೇನೆ. ನೀವು ಕೇಳಿದ್ದೆಲ್ಲ ಸಿಗುತ್ತೆ ಎನ್ನಲ್ಲ, ಆದರೆ ಗರಿಷ್ಠ ಪ್ರಮಾಣದಲ್ಲಿ ಬಗೆಹರಿಸುತ್ತೇನೆ” ಎಂದರು.