ಸಂಭಾಲ್ (ಉತ್ತರ ಪ್ರದೇಶ): ಎಂಟು ವರ್ಷಗಳ ಹಿಂದೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಜನ್ಮದಿನದಂದು ಮಣ್ಣಿನ ಕೇಕ್ ಕತ್ತರಿಸಿ, ಮಣ್ಣಿನ ಲಡ್ಡುಗಳನ್ನು ವಿತರಿಸಿದ್ದ ಆರೋಪ ಪ್ರಕರಣದಲ್ಲಿ ಮೂವರನ್ನು ಸಂಭಾಲ್ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ನ್ಯಾಯಾಲಯ ಹೊರಡಿಸಿದ ಬಂಧನ ವಾರೆಂಟ್ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಶಕೀಲ್ ಉರ್ ರೆಹಮಾನ್ ಮಲಿಕ್, ನೂರ್ ಖಾನ್ ಹಾಗೂ ಜುಲ್ಫಿಕರ್ ಎಂಬುವವರೇ ಬಂಧಿತರೆಂದು ಗುರುತಿಸಲಾಗಿದೆ. ಈ ಪೈಕಿ ಶಕೀಲ್, ನನಗೆ ಬಿಜೆಪಿಯೊಂದಿಗೆ ನಂಟಿದೆ, ಆದ್ದರಿಂದ ಸಮಾಜವಾದಿ ಪಕ್ಷದ ಸಂಸದ ಮತ್ತು ಶಾಸಕರು ನನ್ನನ್ನು ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಭಾಲ್ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಪ್ರತಿಕ್ರಿಯಿಸಿ, ”2015ರಲ್ಲಿ ಸಂಭಾಲ್ನ ಶಂಕರ್ ಕಾಲೇಜು ಸರ್ಕಲ್ನಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ಕುರಿತು ಅಮರ್ ಸಿಂಗ್ ಎಂಬವರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಶನಿವಾರ ನ್ಯಾಯಾಲಯದಿಂದ ಬಂಧನ ವಾರಂಟ್ ಜಾರಿಯಾಗಿದೆ. ಆದ್ದರಿಂದ ಶನಿವಾರವೇ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.
Laxmi News 24×7