(ಅಸ್ಸಾಂ): ಮದರಸಾವೊಂದರ ಹಾಸ್ಟೆಲ್ ಕೊಠಡಿಯಲ್ಲಿ ಶಿರಚ್ಛೇದಿಸಿದ ಸ್ಥಿತಿಯಲ್ಲಿ 12 ವರ್ಷದ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಢೋಲೈ ಗ್ರಾಮದ ದಾರುಸ್ ಸಲಾಮ್ ಹಫೀಜಿಯಾ ಮದರಸಾದ ಹಾಸ್ಟೆಲ್ನಲ್ಲಿ ಶಿಕ್ಷಕರು ಬೆಳಗ್ಗೆ ವಿದ್ಯಾರ್ಥಿಗಳನ್ನು ಎಬ್ಬಿಸಲು ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ಹತ್ಯೆಯಾದ ವಿದ್ಯಾರ್ಥಿ ಕಳೆದ ರಾತ್ರಿ ಊಟ ಮುಗಿಸಿ ನಿದ್ರಿಸಲು ತನ್ನ ಕೊಠಡಿಗೆ ತೆರಳಿದ್ದ. ಬೆಳಗ್ಗೆ ಫಜ್ರ್ ನಮಾಝ್‌ಗಾಗಿ (ಬೆಳಗಿನ ಪ್ರಾರ್ಥನೆ) ವಿದ್ಯಾರ್ಥಿಗಳನ್ನು ಎಬ್ಬಿಸಲು ಶಿಕ್ಷಕರು ಕೋಣೆಗೆ ತೆರಳಿದ್ದಾರೆ. ಆಗ ಶಿರಚ್ಛೇದಗೊಂಡು ರಕ್ತದ ಮಡುವಿನಲ್ಲಿ ವಿದ್ಯಾರ್ಥಿ ಬಿದ್ದಿರುವ ಭೀಕರ ದೃಶ್ಯ ಕಂಡುಬಂದಿದೆ. ಘಟನೆಯಿಂದ ಆಘಾತಗೊಂಡ ಮದರಸಾದವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಎಸ್ಎಂಸಿಹೆಚ್) ರವಾನಿಸಿದ್ದಾರೆ. ಹಾಸ್ಟೆಲ್ನಲ್ಲಿ ವಾಸವಾಗಿದ್ದ ಇತರ 20 ವಿದ್ಯಾರ್ಥಿಗಳು ಹಾಗೂ ಮದರಸಾದ ಮೂವರು ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯ ಎಸಗಿದವರು ಯಾರು ಮತ್ತು ಇದರ ಹಿಂದಿನ ಕಾರಣವೇನು ಎಂಬುವುದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Laxmi News 24×7