ರಾಯಚೂರು: ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದಿದೆ.
ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಗುರುವಾರ ರಾತ್ರಿ ಘಟನೆ ಜರುಗಿದೆ. ಬಸವನಗೌಡ ಆಗೋಲಿ (34) ಮೃತರು.
ಇವರು ಮಸ್ಕಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಹೃದಯಾಘಾತದಿಂದ ಸಾವು: ಕರ್ತವ್ಯನಿರತ ಎಎಸ್‌ಐ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಾ ಪೊಲೀಸ್ ಠಾಣೆಯಲ್ಲಿ (ಜುಲೈ 7-2023) ನಡೆದಿತ್ತು. ಶಿರಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಗಂಗಣ್ಣ (56) ಮೃತರು. ಗಂಗಣ್ಣ ಅವರು ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಕರ್ತವ್ಯದಲ್ಲಿದ್ದರು. ಈ ವೇಳೆ ಹೃದಯಾಘಾತವಾಗಿದೆ. ಜೊತೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತುಮಕೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಗಳನ್ನು ಟ್ಯೂಷನ್‌ಗೆ ಬಿಡಲು ಹೋಗಿ ತಂದೆ ಮೃತ: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದಿದ್ದ ತಂದೆಗೆ ಹೃದಯಾಘಾತವಾಗಿ ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿ(ಜುಲೈ 19-2023) ನಡೆದಿತ್ತು. ಮೃತರನ್ನು ಲಕ್ಷ್ಮಣ (42) ಎಂದು ಗುರುತಿಸಲಾಗಿದೆ. ಜು.17 ರಂದು ಬೆಳಗ್ಗೆ 5.30ರ ಸುಮಾರಿಗೆ ಲಕ್ಷ್ಮಣ ದ್ವಿಚಕ್ರ ವಾಹನದಲ್ಲಿ ತನ್ನ ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದಿದ್ದರು. ಟ್ಯೂಷನ್ ಸೆಂಟರ್ ಮುಂದೆ ಬೈಕ್ ನಿಲ್ಲಿಸಿ, ಮಗಳು ಬೈಕ್‌ನಿಂದ ಇಳಿದು ಟ್ಯೂಷನ್ ಸೆಂಟರ್ ಬಾಗಿಲಿಗೆ ಹೋಗುತ್ತಿದ್ದಂತೆ ಲಕ್ಷ್ಮಣ ಬೈಕ್‌ನಿಂದ ಕುಸಿದು ಬಿದ್ದಿದ್ದರು.