ಚಿಕ್ಕೋಡಿ : ಆಗಸ್ಟ್ 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಆರು ಜನ ಸಚಿವರು ಅಥಣಿ ತಾಲೂಕಿನ ಕೋಕಟನೂರ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆ ಈ ಭಾಗದ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಬಹು ದಿನಗಳ ಕೆಲ ಬೇಡಿಕೆಗಳಿಗೆ ಈಗಲಾದರೂ ಸಿಎಂ ಮನ್ನಣೆ ನೀಡಬಹುದೆಂದು ಶಿವಯೋಗಿಗಳ ನಾಡಿನ ಜನರಲ್ಲಿ ಭರವಸೆ ಮೂಡಿದೆ.
ಹೌದು, ಆ.11 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಆರು ಜನ ಸಚಿವರು ತಾಲೂಕಿನ ಕೋಕಟನೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆ, ಈ ಭಾಗದ ಜನರಲ್ಲಿ ಬಹುದಿನಗಳ ಬೇಡಿಕೆ ಮತ್ತೆ ಚಿಗುರೊಡೆದು ನಿಂತಿದೆ. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅಥಣಿ ಭಾಗದಲ್ಲಿ ಯಾವುದೇ ಕೃಷಿ ಚಟುವಟಿಕೆಗಳಿಲ್ಲದೇ ರೈತರು ಕಂಗಾಲಾಗಿದ್ದು, ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸಬೇಕು ಎಂಬುದು ರೈತರ ಒತ್ತಾಯ.
2019 ರಲ್ಲಿ ಕೃಷ್ಣ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳಿಗೆ ಅಂದಿನ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿದ್ದ ಅಧಿಕಾರಿಗಳ ಎಡವಟ್ಟಿನಿಂದ ಇದುವರೆಗೂ ಪರಿಹಾರ ಬಾರದೇ ನೆರೆ ಸಂತ್ರಸ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ಪ್ರತಿ ವರ್ಷ ಕೃಷ್ಣ ನದಿ ಪ್ರವಾಹಕ್ಕೆ ಹತ್ತಾರು ಗ್ರಾಮಗಳು ಸಂಪೂರ್ಣ ಮುಳುಗುತ್ತಿದ್ದು, ಈ ಊರುಗಳಿಗೆ ಶಾಶ್ವತ ನೆಲೆ ನೀಡುವಂತೆ ಸ್ಥಳೀಯ ಶಾಸಕರ ಮುಖಾಂತರ ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಪುನರ್ವಸತಿ ಎಂಬುವುದು ಕಬ್ಬಿಣದ ಕಡಲೆಯಾಗಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಸಿಎಂ ಮುಕ್ತಿ ನೀಡಲಿ ಎನ್ನುವುದು ಜನರ ಕೂಗಾಗಿದೆ.
ಯಾರು ಹಸಿವಿನಿಂದ ಬಳಲಬಾರದು ಎಂದು ಮುಖ್ಯಮಂತ್ರಿ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಅಥಣಿ ಪಟ್ಟಣದಲ್ಲಿ ಸ್ಥಾಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ತಾಲೂಕಿಗೆ 103 ಹಳ್ಳಿಯ ಜನರು ಸರ್ಕಾರಿ ಮತ್ತು ವಿವಿಧ ಕೆಲಸಗಳಿಗೆ ಆಗಮಿಸುತ್ತಿರುತ್ತಾರೆ. ಈ ವೇಳೆ, ದುಪ್ಪಟ್ಟು ಹಣ ನೀಡಿ ಹೋಟೆಲ್ನಲ್ಲಿ ಆಹಾರ ಸೇವಿಸುವಂತಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಅನ್ನು ಮುಖ್ಯಮಂತ್ರಿಯವರು ಇಲ್ಲಿ ಉದ್ಘಾಟನೆ ಮಾಡಲಿ ಎಂದು ರೈತರು ತಿಳಿಸಿದ್ದಾರೆ.