ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 7 ತಿಂಗಳ ಗರ್ಭಿಣಿ ಕಳೆದ ಎರಡು ದಿನದಿಂದ ಕರ್ನಾಟಕದ ಗಡಿಯಲ್ಲಿ ನರಳಾಟ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಯ ಅನುಮತಿಗಾಗಿ ಬೆಳಗಾವಿ ಪೊಲೀಸರು ಕಾಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಮೂರು ದಿನದ ಹಿಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 30 ಜನ ಹೊರಟಿದ್ದರು. ಮಹಾರಾಷ್ಟ್ರದ ಪಾಸ್ ಪಡೆದಿದ್ದ ಈ ಗುಂಪು, ಕರ್ನಾಟಕ ಪ್ರವೇಶದ ಸೇವಾಸಿಂಧು ಪಾಸ್ ಪಡೆದಿರಲಿಲ್ಲ. ಹಾಗಾಗಿ ರಾಜ್ಯದೊಳಗೆ ಪ್ರವೇಶ ಸಾಧ್ಯವಾಗುತ್ತಿಲ್ಲ. ನಿಪ್ಪಾಣಿಯಲ್ಲಿ ಕಳೆದ ಎರಡು ದಿನಗಳಿಂದ ಬಸ್ಸಿನಲ್ಲೇ ತಂಗಿರುವ ಏಳು ತಿಂಗಳ ಗರ್ಭಿಣಿ ದೀಪಿಕಾ ಶೆಟ್ಟಿ, ಉಡುಪಿಯ ಕುಕ್ಕೆಹಳ್ಳಿ ನಿವಾಸಿ. ಅವರು ಕೂಡ ಕೊಲ್ಲಾಪುರ ಪೆಟ್ರೋಲ್ ಪಂಪ್ ನಲ್ಲಿ ಎರಡು ದಿನ ಕಳೆದಿದ್ದಾರೆ.
ಸ್ಥಳೀಯ ಹೋಟೆಲ್ ಉದ್ಯಮಿ ಊಟ-ತಿಂಡಿ ವ್ಯವಸ್ಥೆ ಮಾಡಿದ್ದಾರೆ. ನಂತರ ಕೊಲ್ಲಾಪುರ ಲಾಡ್ಜ್ ನಲ್ಲಿ ರೂಂ ವ್ಯವಸ್ಥೆಯಾಗಿತ್ತು. ಆದರೆ ಕಳೆದ ರಾತ್ರಿ 1.30ಕ್ಕೆ ಕೊಲ್ಲಾಪುರ ಪೊಲೀಸರು ರೂಮ್ ಖಾಲಿ ಮಾಡಿಸಿದ್ದಾರೆ. ಗರ್ಭಿಣಿಯೂ ಬಸ್ಸಲ್ಲಿ ಎರಡು ದಿನ ಕಳೆಯುವಂತಾಗಿದೆ. ಗರ್ಭಿಣಿ ಮತ್ತು ಆಕೆಯ ತಮ್ಮನನ್ನು ಉಡುಪಿಗೆ ಕಳುಹಿಸಿಕೊಡಿ ಎಂದು ಜೊತೆಗಿದ್ದವರು ಗೋಗರೆಯುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಗಳು, ಕರ್ನಾಟಕದ ಕರಾವಳಿಯ ಜನಪ್ರತಿನಿಧಿಗಳು ಇತ್ತ ಗಮನ ಕೊಡಬೇಕಾಗಿದೆ.