ಚಿಕ್ಕಮಗಳೂರು: ಇಲ್ಲಿನ ಗೌರಿ ಕಾಲುವೆಯ ನಿವಾಸಿ ಸಹನಾ ಮೊಸೆಸ್ ಎಂಬವರು ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.
ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಒಂದಲ್ಲ, ಎರಡಲ್ಲ 5 ಜನರ ಬಾಳಿಗೆ ಬೆಳಕಾಗಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಕುಟುಂಬದವರ ದೃಢ ನಿರ್ಧಾರ ಹಾಗೂ ಸಹನಾ ಅವರ ಆಸೆಯಂತೆಯೇ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಇಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಸಹನಾರ ಕಣ್ಣು, ಕಿಡ್ನಿ ಹಾಗೂ ಯಕೃತ್ತನ್ನು ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಆಂಬುಲೆನ್ಸ್ ಮೂಲಕ ಬೆಂಗಳೂರು ಮತ್ತು ಮಂಗಳೂರಿಗೆ ರವಾನಿಸಿದರು. ಸಹನಾರ ಅಂಗಾಂಗಗಳನ್ನು ಆಸ್ಪತ್ರೆಯಿಂದ ಹೊರತರುತ್ತಿದ್ದಂತೆಯೇ ಅವರ ಬಂಧು-ಬಳಗ, ಹಿತೈಷಿಗಳು ಅವರ ಭಾವಚಿತ್ರ ಹಿಡಿದು ನಮನ ಸಲ್ಲಿಸಿದರು.
ಸಹನಾ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ರೋಬಿನ್ ಮೊಸೆಸ್ ಅವರ ಧರ್ಮಪತ್ನಿ. ಕೊರೊನಾ ಸಮಯದಲ್ಲಿ ಪತಿಯ ಜೊತೆ ನಿಂತು ಸಾಮಾಜಿಕ ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದರು. “ನಾವು ಸತ್ತ ಮೇಲೆ ದೇಹ ಮಣ್ಣಾಗುತ್ತದೆ, ಸುಟ್ಟರೆ ಬೂದಿಯಾಗುತ್ತೆ. ಒಂದು ವೇಳೆ ನಮ್ಮ ದೇಹದಲ್ಲಿರುವ ಅಂಗಾಂಗಗಳನ್ನು ಬೇರೆಯವರಿಗೆ ನೀಡಿದರೆ ಅವರ ಬದುಕು ಬೆಳಕಾಗುತ್ತದೆ. ಆದ್ದರಿಂದ ನಾವು ಸತ್ತ ಮೇಲೆ ನಮ್ಮಲ್ಲಿರುವ ಅಂಗಾಂಗಗಳನ್ನು ದಾನ ಮಾಡಿ, ಇತರರ ಬಾಳಿಗೆ ಬೆಳಕಾಗೋಣ” ಎಂದು ಸಹನಾ ನಿರ್ಧರಿಸಿದ್ದರು. ಅದೇ ರೀತಿ ಅವರ ಆಸೆಯಂತೆ ಕುಟುಂಬ ಸದಸ್ಯರು ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.