ಕಲಬುರಗಿ: ಕಳೆದ ಜೂ.1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 283 ಮನೆಗಳು ಭಾಗಶಃ ಹಾನಿಗೊಂಡಿದ್ದು, ಹಾನಿಯಾದ ಮನೆಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಇದಲ್ಲದೇ 20 ಕಿಮೀ ರಾಜ್ಯ ಹೆದ್ದಾರಿ, 27.50 ಕಿಮೀ ಜಿಲ್ಲಾ ಹೆದ್ದಾರಿ, 100 ಕಿಮೀ ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿಮೀ ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ತೀವ್ರ ಮಳೆಯಿಂದ ಜಿಲ್ಲಾದ್ಯಂತ 281 ವಿದ್ಯುತ್ ಕಂಬಗಳು, 35 ಟ್ರಾನ್ಸ್ಫಾರ್ಮರ್ಗಳು ಹಾನಿಗೊಂಡಿದ್ದು, ಈ ಪೈಕಿ ಕ್ರಮವಾಗಿ 203 ವಿದ್ಯುತ್ ಕಂಬಗಳು ಮತ್ತು 31 ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಪ್ರಸರಣಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಜಿಲ್ಲಾದ್ಯಂತ ಮಳೆಯಿಂದ ಯಾವುದೇ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಮಳೆಯ ಪರಿಸ್ಥಿತಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದು, ಅವರು ಅಗತ್ಯ ಸಲಹೆ ಸೂಚನೆ ನೀಡಿದ್ದು, ಅದನ್ನು ಪಾಲಿಸಲಾಗುತ್ತಿದೆ ಎಂದಿದ್ದಾರೆ.
5 ಲಕ್ಷ ರೂ. ಪರಿಹಾರ ವಿತರಣೆ: ಕಳೆದ ಜು.24 ರಂದು ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತ ಪರಿಣಾಮ ಗ್ರಾಮದ 38 ವರ್ಷದ ಬಸಮ್ಮ, ಪತಿ ಬಸವರಾಜ ಬಳಗಾರ ಅವರು ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಇನ್ನು ಜಿಲ್ಲಾದ್ಯಂತ ಯಾವುದೇ ಜಾನುವಾರುಗಳ ಪ್ರಾಣ ಹಾನಿ ಕುರಿತು ವರದಿಯಾಗಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
Laxmi News 24×7