ಹಾವೇರಿ : ಜಿಲ್ಲೆಯ ಯುವ ರೈತರು ಇದೀಗ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಯುವಕರಿಗೆ ಇದೀಗ ಮದುವೆಯಾಗಲು ಕನ್ಯೆ ಸಿಗುತ್ತಿಲ್ಲ. ಹೀಗಾಗಿ ಜಿಲ್ಲೆಯ ಯುವಕರು ವಿವಿಧೆಡೆ ಕನ್ಯೆ ನೋಡಿ ಬರುತ್ತಾರೆ. ಆದರೆ ಹುಡುಗಿಯ ಕಡೆಯವರು ಕೃಷಿಕರಿಗೆ ಕನ್ಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಸಂಬಂಧ ಹಲವು ಭಾಗ್ಯಗಳನ್ನು ಆರಂಭಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ಯಾಭಾಗ್ಯ ಯೋಜನೆಯನ್ನು ಆರಂಭಿಸುವಂತೆ ಜಿಲ್ಲೆಯ ರೈತರು ಪತ್ರ ಬರೆಯುವ ಮೂಲಕ ಹೊಸ ಅಭಿಯಾನ ಆರಂಭಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ರೈತರು ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ಯಾಭಾಗ್ಯ ಯೋಜನೆ ತರುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಕನಿಷ್ಠ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಬೇಕು. ರೈತರನ್ನು ಮದುವೆ ಆದ ವಿದ್ಯಾವಂತ ಯುವತಿಯರಿಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಬೇಕು. ಮನೆಯೊಡತಿಗೆ ತಿಂಗಳಿಗೆ 2 ಸಾವಿರ ಕೊಡುವ ಮಾದರಿಯಲ್ಲಿ ರೈತರನ್ನು ಮದುವೆಯಾದ ಯುವತಿಯರಿಗೂ ಹಣ ಕೊಡಬೇಕು. ಇಂತಹ ಕಾರ್ಯಕ್ರಮಗಳನ್ನು ಒಳಗೊಂಡ ಕನ್ಯಾಭಾಗ್ಯ ಯೋಜನೆ ಜಾರಿಗೆ ತರಬೇಕೆಂದು ಪತ್ರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಬಸವರಾಜ್, ನಮ್ಮದು ರೈತಾಪಿ ಕುಟುಂಬ. ನಮ್ಮ ಸಹೋದರರಿಗೆ ಮದುವೆಯಾಗಲು ಕನ್ಯೆಯರು ಸಿಗುತ್ತಿಲ್ಲ. ಕಳೆದ ಐದಾರು ವರ್ಷಗಳಿಂದ ನಾವು ಕನ್ಯೆಯನ್ನು ಹುಡುಕುತ್ತಿದ್ದೇವೆ. ಆದರೆ ನಮಗೆ ಕನ್ಯೆ ನೀಡಲು ರೈತರ ಕುಟುಂಬಗಳೇ ಮುಂದೆ ಬರುತ್ತಿಲ್ಲ. ಕೊನೆಯ ಪಕ್ಷ ಕ್ಲರ್ಕ್, ಜವಾನನಾದರೂ ಸರಿ ಸರ್ಕಾರಿ ನೌಕರನಾಗಿದ್ದರೆ ಮಾತ್ರ ಕನ್ಯೆ ನೀಡುವುದಾಗಿ ಹುಡುಗಿಯ ಪೋಷಕರು ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿದರು.
ರೈತ ಸಂತೋಷ್ ಮಾತನಾಡಿ, ನಾವು ತಲೆ ತಲಾಂತರದಿಂದ ಕೃಷಿ ಮಾಡಿಕೊಂಡು ಬರುತ್ತಿದ್ದೇವೆ. ಈಗ ರೈತರಿಗೆ ಕನ್ಯೆ ಸಿಗುತ್ತಿಲ್ಲ. ನಮಗೆ ಎಕರೆಗಟ್ಟಲೇ ಜಮೀನು ಇದ್ದರೂ ಕನ್ಯೆ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಒಂದು ವರ್ಷದಲ್ಲಿ ನಾವು ಇತರ ನೌಕರರು ಸಂಪಾದನೆ ಮಾಡುವುದಕ್ಕಿಂತ ಹೆಚ್ಚು ಸಂಪಾದನೆ ಮಾಡುತ್ತೇವೆ. ಆದರೆ ಕೃಷಿ ಕುಟುಂಬಸ್ಥರು ನಮ್ಮ ಜೀವನ ಹೀಗಾಗಿದೆ. ನಮ್ಮ ಮುಂದಿನ ಪೀಳಿಗೆ ಜೀವನ ಹೀಗಾಗುವುದು ಬೇಡ ಎಂಬ ಧೋರಣೆ ಹೊಂದಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ವೈದ್ಯರು, ಇಂಜಿನಿಯರ್ ಸೇರಿದಂತೆ ಸರ್ಕಾರಿ ನೌಕರಿಯಲ್ಲಿರುವ ಹುಡುಗರೇ ಹುಡುಗಿಯರ ಪೋಷಕರಿಗೆ ಬೇಕು. ಈ ತರ ಆದರೆ ಕೃಷಿ ಮಾಡುವವರು ಯಾರು ಎಂದು ಆತಂಕ ವ್ಯಕ್ತಪಡಿಸಿದರು. ರೈತ ಮನೆತನಗಳು ಉಳಿಯಬೇಕಾದರೆ ರೈತರಿಗೆ ಕನ್ಯೆ ಕೊಡಬೇಕು ಎಂದು ಹೇಳಿದರು.ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಕೇಳದೆ ಗ್ಯಾರಂಟಿ ಯೋಜನೆ ನೀಡಿದ್ದಾರೆ. ಅದೇ ರೀತಿ ನಮಗೂ ಸಹ ಗ್ಯಾರಂಟಿ ಯೋಜನೆ ರೂಪಿಸಿ ಕಂಕಣಭಾಗ್ಯ ನೀಡಬೇಕು ಎಂದು ಯುವ ರೈತರು ಒತ್ತಾಯಿಸಿದ್ದಾರೆ.