ಬೆಂಗಳೂರು: ನ್ಯಾಯಾಲಯಗಳಲ್ಲಿ ದೀರ್ಘಕಾಲಿಕ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ 2023ನೇ ಸಾಲಿನ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.
ರೈತರು, ಬಡವರಿಗೆ ತ್ವರಿತ ನ್ಯಾಯದಾನ ಕಲ್ಪಿಸಿಕೊಡುವ ಹಾಗೂ ಸರ್ಕಾರಿ ವ್ಯಾಜ್ಯಗಳಲ್ಲಿ ಪರಾಜಯ ತಪ್ಪಿಸಲು ಪೂರಕವಾಗಲಿರುವ ಎರಡು ಹೊಸ ಕಾನೂನುಗಳು ಜಾರಿಗೆ ಬರಲಿವೆ.
ಸಣ್ಣ, ಅತೀ ಸಣ್ಣ ರೈತರು ಹಾಗೂ ಆರ್ಥಿಕವಾಗಿ ದುರ್ಬಲರಾದ ವ್ಯಕ್ತಿಗಳ ವ್ಯಾಜ್ಯಗಳು ಕಾಲಮಿತಿಯಲ್ಲಿ ಇತ್ಯರ್ಥ ಆಗಲು ಅನುಕೂಲವಾಗುವ ಸಿವಿಲ್ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ವಿಧೇಯಕ ಮಂಡನೆಯಾಗಿದೆ. ಸಣ್ಣ, ಅತೀ ಸಣ್ಣ ರೈತರು ಹಾಗೂ ಬಡವರಿಗೆ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ದೀರ್ಘ ಕಾಲ ಎದುರಿಸಲು ಆರ್ಥಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಇವುಗಳ ಶೀಘ್ರ ವಿಲೇವಾರಿಯಾಗಬೇಕಿದೆ. ಇಂತಹ ಪ್ರಕರಣಗಳು ಕಾಲಮಿತಿಯಲ್ಲಿ ವಿಲೇವಾರಿ ಆಗುವುದಕ್ಕೆ ಹೊಸ ಕಾಯ್ದೆ ಸೂಕ್ತ ಕಾರ್ಯವಿಧಾನ ರೂಪಿಸಲಿದೆ ಎಂಬುದಾಗಿ ವಿಧೇಯಕದಲ್ಲಿ ಹೇಳಲಾಗಿದೆ.