ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಮದ್ಯದ ಅಮಲಿನಲ್ಲಿ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕೊಲೆ ಮಾಡಿದ ಆರೋಪದಡಿ ಪತಿಯನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಚಿಕ್ಕತಾಯಮ್ಮನನ್ನ ಹತ್ಯೆ ಮಾಡಿದ್ದ ಆರೋಪದಡಿ ಪೊಲೀಸರು ಪತಿ ನಾಗರತ್ನಂ ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ತಮಿಳುನಾಡು ಮೂಲದ ನಾಗರತ್ನಂ ಮತ್ತು ಚಿಕ್ಕತಾಯಮ್ಮ ದಂಪತಿ ಕಾಮಾಕ್ಷಿಪಾಳ್ಯ ಕರೆ ಕಲ್ಲು ಏರಿಯಾದಲ್ಲಿ ವಾಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ 29 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ. ಆರೋಪಿ ನಾಗರತ್ನಂಗೆ ಕುಡಿತದ ಚಟ ಹೆಚ್ಚಾಗಿತ್ತು. ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ. ನಾಗರತ್ನಂ ಶಾಲೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ಆಗಿ ಕೆಲಸ ಮಾಡುತ್ತಿದ್ದ.
ಪತ್ನಿಯೂ ಅದೇ ಶಾಲೆಯಲ್ಲಿ ಕೆಲಸ ಮಾಡಿ ಬಂದ ಹಣದಲ್ಲಿ ಮನೆ ನಡೆಸುತ್ತಿದ್ದರು. ನಿನ್ನೆ ರಾತ್ರಿ ಕುಡಿದು ಬಂದ ಪತಿ, ಪತ್ನಿಯೊಂದಿಗೆ ಜಗಳಕ್ಕೆ ನಿಂತಿದ್ದ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಸುತ್ತಿಗೆಯಿಂದ ಆಕೆಯ ತಲೆ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ಪತಿ ಪರಾರಿಯಾಗಿದ್ದ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.