Breaking News

ಈ ಬಜೆಟ್ ಮೇಲೆ ಬೆಳಗಾವಿ ಜಿಲ್ಲೆಯ ರೈತರ ಬೆಟ್ಟದಷ್ಟು ನಿರೀಕ್ಷೆ

Spread the love

ಬೆಳಗಾವಿ: ಐದು ಗ್ಯಾರಂಟಿ‌ ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಜೆಟ್ ನಾಳೆ ಮಂಡನೆಯಾಗಲಿದೆ.

ಈ ಬಜೆಟ್ ಮೇಲೆ ಬೆಳಗಾವಿ ಜಿಲ್ಲೆಯ ರೈತರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿಯಾದರೂ ನಮ್ಮ ಬೇಡಿಕೆ ಈಡೇರುತ್ತವೋ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.

ಬೆಳಗಾವಿ ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ. ರಾಜ್ಯದ ಎರಡನೇ ರಾಜಧಾನಿ ಅಂತಾನೂ ಕರೆಸಿಕೊಳ್ಳುತ್ತದೆ. ಇಲ್ಲಿನ ಜನರ ಬಹುತೇಕ ಕಸಬು ಕೃಷಿ. ಜಿಲ್ಲೆಯಲ್ಲಿ ಈ ಹಿಂದೆ ನೆರೆ ಇದೀಗ ಬರದಿಂದ ರೈತರು ನಷ್ಟದ ಸುಳಿಗೆ ಸಿಲುಕಿ ಪರದಾಡುತ್ತಿದ್ದಾರೆ. ಚುನಾವಣೆ ವೇಳೆ ನಾವು ರೈತಪರ ಎಂದು ಹೇಳಿ ಅಧಿಕಾರಕ್ಕೆ ಬರುವ ಪಕ್ಷಗಳು ಗೆದ್ದ ಮೇಲೆ ರೈತರತ್ತ ತಿರುಗಿಯೂ‌ ನೋಡುವುದಿಲ್ಲ ಎಂಬ ಆರೋಪವಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ರೈತರು, ಸರ್ಕಾರಕ್ಕೆ ಹತ್ತು ಹಲವು ಸಲಹೆ, ಬೇಡಿಕೆಗಳನ್ನು ಇರಿಸಿದ್ದಾರೆ.

ನೀರಾವರಿ ಯೋಜನೆಗಳು ಅಪೂರ್ಣ: ಸಪ್ತ ನದಿಗಳು ಹರಿಯುತ್ತಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಈವರೆಗೂ ಆಳಿದ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಕಳಸಾ ಬಂಡೂರಿ, ಮಹಾದಾಯಿ ಯೋಜನೆಗೆ ಕೇಂದ್ರದಿಂದ ಡಿಪಿಆರ್ ಆಗಿದ್ದರೂ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಮಲಪ್ರಭಾ ನದಿಯ 11 ಏತ ನೀರಾವರಿ ಯೋಜನೆಗಳು, ಕೃಷ್ಣಾ ನದಿಯ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ, ಖಿಳೇಗಾವ ಬಸವೇಶ್ವರ ಏತ ನೀರಾವರಿ ಯೋಜನೆ, ಅಮ್ಮಾಜೇಶ್ವರಿ, ಕೊಟ್ಟಲಗಿ ಹಾಗೂ ಘಟಪ್ರಭಾ ನದಿಯ ಘಟ್ಟಿ ಬಸವೇಶ್ವರ ಏತ ನೀರಾವರಿ ಯೋಜನೆ ಸೇರಿ ಇನ್ನಿತರ ಕಾಮಗಾರಿಗಳನ್ನು ಆರಂಭಿಸಿ, ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ರೈತರ ಒತ್ತಾಯ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, “ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ದೂರದೃಷ್ಟಿಯ ಬಜೆಟ್ ಮಂಡಿಸಬೇಕು. ಕನಿಷ್ಠ ಮಟ್ಟದ, ಪ್ರಚಾರದ ಬಜೆಟ್ ಮಂಡಿಸಬಾರದು. ಕಳೆದ ಐದು ವರ್ಷಗಳಿಂದ ಸತತವಾಗಿ ಬರಗಾಲ, ನೆರೆ ಹಾವಳಿ, ಕೋವಿಡ್, ರಾಜಕೀಯ ಅತಂತ್ರತೆಯಿಂದಾಗಿ ರೈತ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾನೆ. ಏನೆನೋ ಉಚಿತ ಕಾರ್ಯಕ್ರಮಗಳನ್ನು ಕೊಡುತ್ತಿದ್ದೀರಿ, ಅದಕ್ಕಿಂತ ಪ್ರಮುಖವಾದದ್ದು, ಅನ್ನ ಬೆಳೆಯುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅದೇ ರೀತಿ ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಎಪಿಎಂಸಿಗಳ ಮೂಲಕ ಸರ್ಕಾರ ಯೋಗ್ಯ ಬೆಲೆಯಲ್ಲಿ ಖರೀದಿ ಮಾಡಿ, ಮಾರಾಟ ಮಾಡುವ ವ್ಯವಸ್ಥೆ ಬಗ್ಗೆ ಬಜೆಟ್​ನಲ್ಲಿ ಜಾರಿಗೊಳಿಸಬೇಕು. ನಾಡಿನ ಭವಿಷ್ಯ ಮತ್ತು ರೈತರ ಆರ್ಥಿಕ ಭದ್ರತೆಗಾಗಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ