ಬೆಂಗಳೂರು: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ ರೂ., ದೊಡ್ಡ ಹುದ್ದೆಗೆ ಕೋಟಿ ಕೋಟಿ ಹಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ಬೆಂಗಳೂರು: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ ರೂ., ದೊಡ್ಡ ಹುದ್ದೆಗೆ ಕೋಟಿ ಕೋಟಿ ಹಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು. ಭ್ರಷ್ಟಾಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದು ಯಾವುದೋ ಸಣ್ಣ ಹುದ್ದೆ ಇರಬೇಕು. ಅದಕ್ಕೆ 30 ಲಕ್ಷ ಕೇಳಿದ್ದಾರೆ, ಅಲ್ಲಿ ಕೋಟ್ಯಂತರ ರೂಪಾಯಿ ಕೇಳುತ್ತಿದ್ದಾರೆ ಎಂದು ಹೆಚ್ಡಿಕೆ ಆರೋಪಕ್ಕೆ ಬೊಮ್ಮಾಯಿ ಧ್ವನಿಗೂಡಿಸಿದರು.
ಐಎಎಸ್, ಐಪಿಎಸ್ ಸೀನಿಯರ್ ಅಧಿಕಾರಿ ವರ್ಗಾವಣೆ ಹಲವಾರು ಬಾರಿ ಆಗುವುದು, ಬಳಿಕ ರದ್ದಾಗುವುದು ಅನೇಕ ಸಲ ಆಗಿದೆ. ವರ್ಗಾವಣೆ ದಂಧೆಗೆ ಇದೇ ಸಾಕ್ಷಿಯಾಗಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಸುಖಾ ಸುಮ್ಮನೆ ಆರೋಪ ಮಾಡಿದ್ದೀರಿ. ಆಗ ಸಾಕ್ಷ್ಯ ಕೇಳಿದಾಗ ಕೊಡಲು ಆಗುತ್ತಾ ಅಂದ್ರಿ. ಈಗ ಸಾಕ್ಷಿ ಹೇಗೆ ಕೇಳುತ್ತೀರಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಸವಾಲು: ಈ ಹಿಂದೆ ನಮ್ಮ ವಿರುದ್ಧ ಆರೋಪ ಮಾಡಿದಾಗ ಅದಕ್ಕೆ ಎಲ್ಲದಕ್ಕೂ ದಾಖಲೆ ಕೊಡೋಕೆ ಆಗುತ್ತಾ ಅಂತಿದ್ರು. ಈಗ ಯಾಕೆ ದಾಖಲೆ ಕೇಳ್ತಾ ಇದ್ದಾರೆ. 40%, 40% ಅಂತಿದ್ರಲ್ವಾ, ಈಗ 40% ಇಲ್ವಲ್ಲ. ಈಗ ಕೆಲಸ ಮಾಡಿ ತೋರಿಸಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರಿ ಪ್ರಾಮಾಣಿಕತೆಯ ಬಗ್ಗೆ ಮಾತಾನಾಡುತ್ತ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಾಗ ಮಾತ್ರ ಈಗ ಹೊರಗಡೆ ಬರಲು ಸಾಧ್ಯ. ಎಲ್ಲಾ ಕಾಮಗಾರಿಗಳಲ್ಲಿ 40% ರೆಡ್ಯೂಸ್ ಮಾಡಿ ಕಾಮಗಾರಿ ಮಾಡಿ. ಕಾಂಟ್ರ್ಯಾಕ್ಟರ್ ಕೂಡ ಅದೇ ದರಕ್ಕೆ ಒಪ್ಪಿಕೊಳ್ಳಬೇಕು. ಈಗ ದುಡ್ಡು ಕಡಿಮೆಯಾಗಬೇಕಲ್ಲ. ನಮ್ಮಲ್ಲಿ 40% ಇತ್ತು ಅಂತಾ ಆರೋಪ ಮಾಡಿದ್ರಲ್ಲ. ಈಗ ಕಡಿಮೆ ಆಗಬೇಕು ಎಂದು ಸರ್ಕಾರಕ್ಕೆ ಬೊಮ್ಮಾಯಿ ಕುಟುಕಿದರು. ಬಿಟ್ ಕಾಯಿನ್ ವಿಚಾರ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ಮಾಡಲಿ. ಒಳ್ಳೆಯದಾಗಲಿ. ಎಸ್ಐಟಿ, ಲೋಕಾಯುಕ್ತ ಯಾವ ತನಿಖೆಯನ್ನು ಬೇಕಾದ್ರೂ ಮಾಡಿಸಲಿ ಎಂದು ಬೊಮ್ಮಾಯಿ ಹೇಳಿದ್ರು.