ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹರಿಯುವ ದೂಧಗಂಗಾ ನದಿಯ ಪಕ್ಕದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ದೊರೆತಿವೆ.
ಜಾನುವಾರುಗಳ ಮೈ ತೊಳೆಯಲು ಹೋದಾಗ ರೈತರ ಕಣ್ಣಿಗೆ ಈ ತಲೆ ಬುರುಡೆಗಳು ಕಾಣಿಸಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಲ್ಲಿರುವ ಹಾಗೂ ಗಡಿ ಜಿಲ್ಲೆ ಬೆಳಗಾವಿಗೆ ಹೊಂದಿಕೊಂಡಿರುವ ಶಿದ್ನಳ್ಳಿ ಗ್ರಾಮದಲ್ಲಿ ತಲೆಬುರುಡೆಗಳು ಸಿಕ್ಕಿದ್ದು, ಕೂಡಲೇ ಸ್ಥಳೀಯರು ಕಾಗಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ತಲೆಬುರುಡೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ಈ ತಲೆ ಬುರಡೆಗಳು ತಲೆನೋವಾಗಿ ಪರಿಣಮಿಸಿದೆ. ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿ ಮಹಾರಾಷ್ಟ್ರ ಪೊಲೀಸರು ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ, ನದಿ ಪಕ್ಕ ಸಿಕ್ಕ ತಲೆಬುರುಡೆಗಳನ್ನು ಕಾಗಲ್ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಇವು ಯಾರ ತಲೆ ಬುರುಡೆಗಳು?, ಏನಾಗಿದೆ ಎಂಬ ಕುರಿತು ಪೊಲೀಸ್ ತನಿಖೆಯಿಂದ ಮಾಹಿತಿ ಬಹಿರಂಗವಾಗಬೇಕಿದೆ.
ಮಳೆಯಿಂದಾಗಿ ದೂಧಗಂಗಾ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿದೆ. ಪರಿಣಾಮ ತಲೆಬುರುಡೆಗಳು ದೊರೆತಿವೆ. ಒಂದೇ ಸ್ಥಳದಲ್ಲಿ ನಾಲ್ಕು ಮಾನವ ತಲೆ ಬುರುಡೆಗಳು ದೊರೆತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ವಿಷಯ ತಿಳಿಯುತ್ತಿದ್ದಂತೆ ತಲೆ ಬುರುಡೆಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿದ್ದರು.
ಕೆಲವು ದಿನಗಳ ಹಿಂದಷ್ಟೇ ವಲಸಿಗ ಭೋಂಡು ಬಾಬಾ ಸಿದ್ದನೇರ್ಲಿ, ಬಾಮನಿ ಗ್ರಾಮಗಳಲ್ಲೂ ಕೂಡ ತಲೆ ಬುರುಡೆಗಳು ಪತ್ತೆಯಾಗಿದ್ದವು. ಇದೀಗ, ಒಂದೇ ಸ್ಥಳದಲ್ಲಿ ನಾಲ್ಕು ತಲೆ ಬುರುಡೆಗಳು ಸಿಕ್ಕಿರುವುದು ಅಘೋರಿಗಳ ಕೃತ್ಯವಿರಬಹುದೇ? ಎಂಬ ಅನುಮಾನ ಮೂಡಿಸಿದೆ. ನದಿಯಲ್ಲಿ ತಲೆಬುರುಡೆಗಳು ಮಾತ್ರ ಪತ್ತೆಯಾಗಿವೆ. ಆದರೆ, ಮೃತದೇಹಗಳನ್ನು ಎಲ್ಲಿ ಬಿಸಾಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಾಗೆಯೇ, ಕಳೆದ ತಿಂಗಳು ಸಾಂಗ್ಲಿ ಜಿಲ್ಲೆಯ ಯುವಕನೊಬ್ಬನನ್ನು ಆತನ ತಂದೆಯೇ ಕೊಲೆ ಮಾಡಿ ಶವವನ್ನು ಪಕ್ಕದ ಬಾಮ್ನಿ ಗ್ರಾಮದ ಗಡಿಯಲ್ಲಿ ಎಸೆದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.