Breaking News

ಕೈಕೊಟ್ಟ ಮಳೆ.. ಹಣ ಕೊಟ್ಟು ನೀರು ಹಾಯಿಸುವಂತಾಯಿತು ರೈತನ ಬದುಕು

Spread the love

ಹುಬ್ಬಳ್ಳಿ: ಆಕಾಶದಲ್ಲಿ ಮೋಡಗಳು ಆವರಿಸುತ್ತಿವೆ. ಆದರೆ ಮಳೆ ಹನಿ ಮಾತ್ರ ಕಾಣುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿ ಸಾಲದ ಶೂಲದಲ್ಲಿ ಸಿಲುಕಿರುವ ರೈತರು ಇದೀಗ ಮುಂಗಾರು ಮಳೆಯ ಅವಕೃಪೆಯಿಂದ ಕಂಗೆಟ್ಟಿದ್ದಾರೆ.

ಕುಡಿಯುವ ನೀರಿನ ಪರದಾಟದೊಂದಿಗೆ ಈಗ ಹಣವನ್ನು ಖರ್ಚು ಮಾಡಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕುವ ಸ್ಥಿತಿಗೆ ಬಂದಿದ್ದಾನೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಮತ್ತೊಂದು ಹಂಗಾಮಿಗೆ ಸಿದ್ಧತೆಯಾಗಬೇಕಿತ್ತು.

ತುಂತುರು ಮಳೆ ಕೂಡ ಸುರಿಯದ ಪರಿಣಾಮ ಬರದ ಭಯ ಸೃಷ್ಟಿಯಾಗಿದೆ. ಸ್ಥಿತಿ ಹೀಗೆ ಮುಂದುವರಿದರೆ ರೈತನ ಪರಿಸ್ಥಿತಿ ದಯನೀಯವಾಗಲಿದೆ. ಬಾರೋ ಮಳೆರಾಯ ಎಂದು ಒಣ ಬೇಸಾಯ ನಂಬಿಕೊಂಡಿರುವ ಜಿಲ್ಲೆಯ ಧಾರವಾಡ, ಗದಗ ಹಾವೇರಿ ಸೇರಿದಂತೆ ಎಲ್ಲೆಡೆ ಈಗ ಆತಂಕ ಆವರಿಸಿದೆ. ಮಳೆ ಬಂದರೆ ಮಾತ್ರ ಕೃಷಿ ಎನ್ನುವ ಕೃಷಿಕರು ಆಕಾಶದೆಡೆ ಮುಖ ಮಾಡಿದ್ದಾರೆ. ಜೋರಾಗಿ ಮಳೆ ಸುರಿದು ಎಲ್ಲೆಡೆ ಹಸಿರು ಕಾಣುವ ಬದಲು ಬಿಸಿಲು, ಬೀಸುತ್ತಿರುವ ಗಾಳಿ ಮಾತ್ರ ರೈತನ ಎದೆಬಡಿತ ಹೆಚ್ಚಿಸಿದೆ.

ನೀರಿಲ್ಲದೆ ಒಣಗುತ್ತಿರುವ ಬೆಳೆಗಳು: ಇನ್ನೂ ಜೂನ್‌ನಿಂದ ಆರಂಭಗೊಳ್ಳುವ ಮುಂಗಾರು ಮಳೆ ಸೆಪ್ಟೆಂಬರ್‌ವರೆಗೆ ಸುರಿಯುತ್ತದೆ. ಜೂನ್, ಜುಲೈನಲ್ಲಿ ಅಲ್ಪಸ್ವಲ್ಪ ಮಳೆ ಸುರಿದಿದ್ದು ಬಿಟ್ಟರೆ ಮೋಡಗಳ ಚೆಲ್ಲಾಟ ಮಾತ್ರ ಕಣ್ಣಿಗೆ ಕಟ್ಟುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನು ಹದಿನೈದು ದಿನಗಳಲ್ಲಿ ಮಳೆಯಾಗಬೇಕು. ವರುಣ ಕೃಪೆ ತೋರದಿದ್ದರೆ ರೈತರು ಹದಗೊಳಿಸಿದ ಭೂಮಿಯಲ್ಲಿ ಬೆಳೆ ಕಾಣಲು ಸಾಧ್ಯವಿಲ್ಲ. ಬಾಡಿದ ಬೆಳೆ ಜಿಲ್ಲೆಯಲ್ಲಿ ಬಿತ್ತನೆ ಕೈಗೊಂಡಿದ್ದ ಸಜ್ಜೆ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ.

ರೈತರು ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಅಲ್ಪ ಸ್ವಲ್ಪ ಮಳೆಯಾದಾಗ ಬಿತ್ತನೆ ಕೈಗೊಂಡಿದ್ದರು. ಇದೀಗ ಬೆಳೆಯುವ ಹಂತದಲ್ಲಿರುವ ಬೆಳೆ ಒಣಗಿ ಹಾನಿಯಾಗುವ ಸ್ಥಿತಿ ಎದುರಾಗಿದೆ. ನೀರಾವರಿ ಸೌಲಭ್ಯವಿರುವ ರೈತರು ಕೈಗೊಂಡ ಬಿತ್ತನೆಗೆ ಉತ್ತಮ ಫಲಿತಾಂಶ ದೊರೆತಿದೆ. ಒಣ ಬೇಸಾಯದಲ್ಲಿ ಮಾತ್ರ ನಿರೀಕ್ಷಿತ ಪ್ರಗತಿಯಿಲ್ಲ. ಹೀಗಾಗಿ ಹಣ ಕೊಟ್ಟು ನಾರು ಖರೀದಿಸಿ ಜಮೀನಿಗೆ ನೀರುಣಿಸುವ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

Spread the loveಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ