ಚಿಕ್ಕಮಗಳೂರು: 30 ವರ್ಷಗಳ ಬಳಿಕ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಕೈ ಕೊಟ್ಟಿದೆ. ಪ್ರತಿ ವರ್ಷ ಸುರಿಯುತ್ತಿದ್ದ ವಾಡಿಕೆ ಮಳೆಯೂ ಆಗದೆ ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲಿ ಬರದ ವಾತಾವರಣ ಸೃಷ್ಟಿಯಾಗುವ ಆತಂಕ ಮೂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಮೇಲೆ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಜನತೆ ದೇವರ ಮೊರೆ ಹೋಗುತ್ತಿದ್ದಾರೆ.
ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುನಿಸಿಕೊಂಡಿರುವ ವರುಣನಿಗಾಗಿ ಮಲೆನಾಡಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, 3 ದಶಕದ ಬಳಿಕ ಕಾಫಿನಾಡಿನಲ್ಲಿ ಬರದ ಆತಂಕ ಮನೆ ಮಾಡಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿ ಸುರಿಯುತ್ತಿತ್ತು. ವರುಣನ ರಣಚಂಡಿ ರೂಪಕ್ಕೆ ಮಲೆನಾಡು ಜನ ಮಳೆಗಾಲ ಮುಗಿದರೇ ಸಾಕು, ಅತಿವೃಷ್ಟಿಯಾಗದಂತೆ ದೇವರ ಮೊರೆ ಹೋಗುತ್ತಿದ್ದರು. ಆದರೆ ಈ ಬಾರಿ 30 ವರ್ಷಗಳ ಬಳಿಕ ಮಳೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೈ ಕೊಟ್ಟಿದ್ದು ವರುಣ ದೇವನ ಸಿಂಚನಕ್ಕಾಗಿ ದೇವರಿಗೆ ಪೂಜೆ ಮಾಡುವ ಸ್ಥಿತಿ ಬಂದಿದೆ.
ಪ್ರತಿನಿತ್ಯ ಮಳೆಗಾಗಿ ಶಕ್ತಿ ದೇವತೆ ಹೊರನಾಡು, ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ, ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ಚಂಡಿಕಾ ಯಾಗವನ್ನೂ ಮಳೆಗಾಗಿ ಮಾಡಲಾಗಿತ್ತು. ಆದರೆ ಮಳೆ ಮಾತ್ರ ಕಣ್ಣ ಮುಚ್ಚಾಲೆ ಆಟವಾಡಲು ಶುರು ಮಾಡಿದೆ. ಮಳೆಗಾಗಿ ಮಲೆನಾಡ ಭಾಗವಾದ ಎನ್ ಆರ್ ತಾಲೂಕಿನ ಮೆಣಸೂರು ಗ್ರಾಮದಲ್ಲಿ ವಿಶೇಷವಾದ ಗಡಿ ಮಾರಿಗೆ ಪೂಜೆ ಮಾಡಿ ಇನ್ನಾದರೂ ಮಳೆ ಸುರಿಸು, ರೈತರ ಸಂಕಷ್ಟಕ್ಕೆ ನೆರವಾಗು ಎಂದು ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದಾರೆ.
ಸಾಂಕ್ರಾಮಿಕ ರೋಗ ನಿವಾರಣೆಗೆ ಎರಡು ವರ್ಷಕ್ಕೊಮ್ಮೆ ಎನ್ ಆರ್ ಪುರ ತಾಲೂಕು ಸೇರಿದಂತೆ ನೂರಾರು ಮಲೆನಾಡು ಭಾಗದ ಗ್ರಾಮದಲ್ಲಿ ಗಡಿ ಮಾರಿ ಪೂಜೆ ಮಾಡಲಾಗುತ್ತದೆ. ಆದರೆ 10 ವರ್ಷಗಳ ಬಳಿಕ ಮಳೆಗಾಗಿ ಗಡಿ ಮಾರಿಗೆ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ. ಪೂಜೆ ಮಾಡಿದ ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಗಡಿ ಮಾರಿಯನನ್ನು ಕಳಿಸಲಾಗುತ್ತೆ. ಗಡಿ ಮಾರಿಯನ ಮತ್ತೊಂದು ಗ್ರಾಮದವರು ಬರ ಮಾಡಿಕೊಂಡು ಮಳೆಗಾಗಿ ಪೂಜೆ ಮಾಡಲಾಗುತ್ತೆ. ಗ್ರಾಮಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ನಡೆಯುತ್ತಿದ್ದ ಗಡಿ ಮಾರಿಗೆ ಪೂಜೆ ಈಗ ಹತ್ತು ವರ್ಷಗಳ ಬಳಿಕ ಮಳೆಗಾಗಿ ಈ ವರ್ಷ ಪೂಜೆ ಮಾಡಲಾಗಿದೆ.