Breaking News

ಅಕ್ಕಿ ಪೂರೈಕೆಗೆ ಟೆಂಡರ್ ಮಾಡಿ ಕ್ರಮ ಕೈಗೊಳ್ಳುವಂತೆ ಮೂರು ಸಂಸ್ಥೆಗಳಿಗೆ ಮನವಿ- ಸಚಿವ ಮುನಿಯಪ್ಪ

Spread the love

ಬೆಂಗಳೂರು: ಅಕ್ಕಿ ಪೂರೈಸಲು ಟೆಂಡರ್ ಮಾಡಿ ಕ್ರಮ ಕೈಗೊಳ್ಳುವಂತೆ ಎನ್‌ಸಿಸಿಎಫ್ ಸೇರಿದಂತೆ ಮೂರು ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ.

ಒಂದು ವಾರದೊಳಗೆ ಗಿರಣಿಗಳ ಮಾಲೀಕರು ಮತ್ತು ವ್ಯಾಪಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಕ್ಕಿ ಪೂರೈಕೆ ಕುರಿತು ಎನ್‌ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ ಕೊಟ್ಟಿರುವ ದರ ಪಟ್ಟಿ ಕುರಿತು ಸಭೆ ನಡೆಯಿತು. ಸಭೆಯ ನಂತರ ಮಾಧ್ಯಮಗಳ ಜೊತೆ ಸಚಿವರು ಮಾತನಾಡಿದರು. ಎಷ್ಟೇ ಕಷ್ಟ ಬಂದರೂ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಅಕ್ಕಿ ವಿತರಿಸುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕ ದರ, ಅಕ್ಕಿ ಪ್ರಮಾಣ, ಪೂರೈಕೆಯ ಅವಧಿ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಲಾಯಿತು. ಸರ್ಕಾರಿ ಸ್ವಾಮ್ಯದ ಮೂರು ಏಜೆನ್ಸಿಗಳು ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಮಾಡಿ ಅಕ್ಕಿ ಸರಬರಾಜು ಮಾಡಲು ಆದಷ್ಟು ಬೇಗ ಒಂದು ತೀರ್ಮಾನ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ. ಅಕ್ಕಿ ದರ, ಯಾವ ರೀತಿಯಲ್ಲಿ ಪೂರೈಕೆ ಮಾಡುತ್ತಾರೆ ಎಂಬ ವಿಚಾರಗಳ ಕುರಿತು ಏಜೆನ್ಸಿಯವರೇ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಈ ಹಿಂದೆಯೂ ಸರ್ಕಾರ ಈ ಸಂಸ್ಥೆಗಳಿಂದ ಅಕ್ಕಿ ಪಡೆದು ಸಾರ್ವಜನಿಕರಿಗೆ ವಿತರಣೆ ಮಾಡಿತ್ತು ಎಂದರು.

10 ಕೆಜಿ ಅಕ್ಕಿ ಕೊಡುವುದು ನಿಶ್ಚಿತ: ಈ ಸಂಸ್ಥೆಗಳು ಅಕ್ಕಿ ಸರಬರಾಜು ಮಾಡಿದ ನಂತರ ರಾಜ್ಯದ ಜನರಿಗೆ ಹತ್ತು ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ. ಮೂರು ಸಂಸ್ಥೆಗಳು ಅಕ್ಕಿ ಕೊಡಲು ಒಪ್ಪಿಗೆ ನೀಡಿದ್ದು, ಒಂದು ವಾರಗಳ ಕಾಲಾವಕಾಶ ಕೇಳಿವೆ. ಅಕ್ಕಿ ಪೂರೈಸುವಂತಹ ವ್ಯಾಪಾರಸ್ಥರು, ಗಿರಣಿಗಳ ಮಾಲೀಕರೊಂದಿಗೆ ಚರ್ಚಿಸಿ ವಾರದೊಳಗೆ ವರದಿ ನೀಡಲಿವೆ. ಆ ನಂತರ ಅಕ್ಕಿ ಪೂರೈಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಎಷ್ಟೇ ಕಷ್ಟವಾದರೂ ಈಗಾಗಲೇ ನೀಡಿರುವ ಭರವಸೆಯಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ವಿತರಿಸುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅನ್ನಭಾಗ್ಯ ಯೋಜನೆ: ಕಾಂಗ್ರೆಸ್​ನ ಪಂಚ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯೂ ಒಂದು. ಈ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುವುದಾಗಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿತ್ತು. ಅಂತೆಯೇ ಇದೀಗ ಅನ್ನಭಾಗ್ಯ ಯೋಜನೆ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಆದ್ರೆ ಸರ್ಕಾರದ ಬಳಿ ಅಕ್ಕಿ ಸಂಗ್ರಹದ ಕೊರತೆ ಎದುರಾಗಿದೆ. ಈ ಮಧ್ಯೆ ಅಕ್ಕಿ ನೀಡಲು ಕೇಂದ್ರ ಆಹಾರ ನಿಗಮ ನಿರಾಕರಿಸಿದೆ. ಇದರಿಂದ ರಾಜ್ಯ ಹಾಗೂ ಕೇಂದ್ರದ ಮಧ್ಯೆ ಜಟಾಪಟಿ ಶುರುವಾಗಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ