ಗೃಹಜ್ಯೋತಿನೋಂದಣಿ ಪ್ರಕ್ರಿಯೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಸಂಜೆ ವೇಳೆಗೆ ಒಟ್ಟು 12.51 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಜೂನ್ 18ರಂದು ಆರಂಭಗೊಂಡಿದ್ದು, ತಾಂತ್ರಿಕ ದೋಷಗಳ ನಡುವೆಯೂ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲ ದಿನ- 96,305, 2ನೇ ದಿನ- 3,34,845 3ನೇ ದಿನ- 4,64,225 ಹಾಗೂ 4ನೇ ದಿನ 3.56 ಲಕ್ಷ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಈ ಸಂಖ್ಯೆ 4.5 ಲಕ್ಷ ದಾಟುವ ನೀರಿಕ್ಷೆ ಇದೆ ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆಯಿಂದ (ಗುರುವಾರ) ರಾಜ್ಯದ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನೋಂದಣಿ ಮಾಡಲು ಪ್ರತ್ಯೇಕ ಲಾಗಿನ್ ಐಡಿ ಹಾಗೂ ಪ್ರತ್ಯೇಕ ಲಿಂಕ್ ನೀಡಲಾಗಿದೆ. ಹಾಗಾಗಿ ನಾಳೆಯಿಂದ ರಾಜ್ಯದ 2000 ವಿದ್ಯುಚ್ಛಕ್ತಿ ಕಚೇರಿಗಳು, ಗ್ರಾಮ ಪಂಚಾಯತಿಗಳು ಹಾಗು ನಾಡಕಛೇರಿಗಳಲ್ಲಿ ಪ್ರತ್ಯೇಕ ಲಿಂಕ್ ಮೂಲಕ ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು.
ಹೊಸಲಿಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಿ, ಅದನ್ನೇ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ. 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ದಿನೇದಿನೇ ಏರಿಕೆ ಕಂಡುಬರುತ್ತಿದ್ದು, ಸಾರ್ವಜನಿಕರು ಯೋಜನೆಯ ಪ್ರಯೋಜನ ಪಡೆಯಲು ಭಾರೀ ಉತ್ಸುಕತೆ ತೋರುತ್ತಿದ್ದಾರೆ.
ಕರ್ನಾಟಕ ಒನ್, ಬೆಂಗಳೂರು ಒನ್ ಹಾಗು ಗ್ರಾಮ ಒನ್ ಜೊತೆಗೆ, ಸಾರ್ವಜನಿಕರು ತಮ್ಮ ಕಂಪ್ಯೂಟರ್, ಲ್ಯಾಪ್ ‘ಟಾಪ್, ಮೊಬೈಲ್ ಫೋನ್ ಗಳಲ್ಲಿ ಹಾಗೂ ಕೆಲವು ವಿದ್ಯುತ್ ಕಚೇರಿಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವು ನಿಗದಿಪಡಿಸದ ಕಾರಣ ಗ್ರಾಹಕರು ಗಡಿಬಿಡಿಯಾಗದೇ, ಆತಂಕಪಡದೇ ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಾಯಿಸಬಹುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.