Breaking News

ಮೋದಿ ಕೊಡುತ್ತಿರುವ 5 ಕೆಜಿ ಬಿಟ್ಟು, ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಕೊಡಬೇಕು: ಜೋಶಿ

Spread the love

ಧಾರವಾಡ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅಕ್ಕಿ ಆರೋಪ ವಿಚಾರಕ್ಕೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್​ ಪಕ್ಷಕ್ಕೆ ತನ್ನ ಕೈಯಿಂದ ಅಕ್ಕಿ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದು ತಿಂಗಳಾಯ್ತು. ಇನ್ನೂ ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಈಗ ಕೊಡುತ್ತಿರುವ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು. ಅದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಯಕ್ಟ್ ಅಡಿ ಕೊಡುತ್ತಿದ್ದೇವೆ. ಈ ಆಯಕ್ಟ್ ಮಾಡಿದ್ದು ನಾವು ಅಂತ ಕಾಂಗ್ರೆಸ್​ನವರು ಹೇಳುತ್ತಿದ್ದಾರೆ. ಅವರು ಆಯಕ್ಟ್ ಪಾಸ್ ಮಾಡಿದ್ದರೂ ಹಣ ಇಟ್ಟಿರಲಿಲ್ಲ. ಮೋದಿಯವರು ಬಂದ ನಂತರ ಶುರು ಮಾಡಿದ್ದೇವೆ. 80 ಕೋಟಿ ಜನರಿಗೆ ನಾವು ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಉಳಿದ 60 ಕೋಟಿ ಜನಸಂಖ್ಯೆಗೆ ಕನಿಷ್ಠ ದರದಲ್ಲಿ ಅಕ್ಕಿ ಕೊಡಬೇಕಾಗುತ್ತದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹಾಗಾಗಿ ರಾಜ್ಯ ಸರ್ಕಾರ ಎಫ್​ಸಿಐದವರು ಅಕ್ಕಿ ಕೊಟ್ಟರೇ ನಾವು ಕೊಡುತ್ತೇವೆ ಅಂತ ಎಲ್ಲೂ ಹೇಳಿಲ್ಲ. ಮೋದಿ ಕೊಡುತ್ತಿರುವ 5 ಕೆಜಿ ಬಿಟ್ಟು, 10 ಕೆಜಿ ಅಕ್ಕಿಯನ್ನು ಅವರು ಕೊಡಬೇಕು” ಎಂದು ಒತ್ತಾಯಿಸಿದರು.

“ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ಮೇಲೆ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳು 10 ಕೆಜಿ ಕೊಡುತ್ತೇವೆ ಎಂದರೆ ಮುಂದೇನು? ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗುತ್ತಾ? ಕೆಲ ರಾಜ್ಯಗಳಲ್ಲಿ ಈಗ ಕೊಡುತ್ತಿದ್ದಾರೆ‌. ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಹೆಚ್ಚುವರಿ ಅಕ್ಕಿ ಆಯಾ ರಾಜ್ಯಗಳು ತಮ್ಮ ವ್ಯವಸ್ಥೆಯಲ್ಲಿ ಕೊಡುತ್ತಿವೆ. ಅದರ ಬಗ್ಗೆ ವಿಚಾರ ಮಾಡದೇ ಘೋಷಣೆ ಮಾಡಿದ್ದಾರೆ” ಎಂದು ಗುಡುಗಿದರು.

“ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಣಿಯಲು ಬರದವರು ನೆಲ ಡೊಂಕು ಅಂದಂತೆ ಸಿದ್ದರಾಮಯ್ಯ ನೀತಿ ಆಗಿದೆ. ತಮಗೆ ಹಣಕಾಸಿನ ಹೊಂದಾಣಿಕೆ ಮಾಡಲು ಆಗದೇ ಆರೋಪ ಮಾಡಿದ್ದಾರೆ. ಸೌಜನ್ಯಕ್ಕೂ ಸಹ ರಾಜ್ಯ ಸರ್ಕಾರ 5 ಕೆಜಿ ಕೇಂದ್ರದ್ದು ಎಂದು ಹೇಳುತ್ತಿಲ್ಲ. ಇದು ಇವರ ದುರಹಂಕಾರ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಇವರು ಬಡವರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ನಾವು ಬಡವರ ಕಲ್ಯಾಣ ಮಾಡುತ್ತಿದ್ದೇವೆ” ಎಂದರು.

“ಹು-ಧಾ ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆ ನಮಗೆ ಬಹುಮತ ಇದೆ. ಬಿಜೆಪಿಯವರೇ ಮೇಯರ್, ಉಪಮೇಯರ್ ಆಗುತ್ತಾರೆ. ಕಾಂಗ್ರೆಸ್ ಪಕ್ಷ ವಾಮಮಾರ್ಗದಿಂದ ಮೇಯರ್, ಉಪಮೇಯರ್ ಆಗಲು ಪ್ರಯತ್ನಿಸುತ್ತಿದೆ. ಅದನ್ನೆಲ್ಲ ಬಿಜೆಪಿ ಹುಸಿಗೊಳಿಸುತ್ತದೆ” ಎಂದು ಜೋಶಿ ಹೇಳಿದರು.

ಬಳಿಕ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಉಚಿತ ಬಸ್ ಪ್ರಯಾಣದಿಂದ ಅವಘಡಗಳು ಆಗುತ್ತಿರುವ ಹಿನ್ನೆಲೆ ಯಾವುದೇ ವ್ಯವಸ್ಥೆ ಇಲ್ಲದೆ, ಯಾವುದೇ ಸರಿಯಾದ ಪ್ಲಾನ್ ಇಲ್ಲದೆ ಮಾಡಿರುವ ಯೋಜನೆಯಿದು. ಈ ಯೋಜನೆಯನ್ನು ಸರಿಯಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಫ್ರೀ ಕೊಡುವುದು ಮಾತ್ರವಲ್ಲ, ಜನರ ಜೀವನವೂ ಅಷ್ಟೇ ಮುಖ್ಯ. ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ