ಬೆಂಗಳೂರು: ಬಿಜೆಪಿಯ ಕೆಲವು ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಜೊತೆಹೊಂದಾಣಿಕೆ ರಾಜಕಾರಣಮಾಡುತ್ತಿದ್ದಾರೆ ಎಂದು ಹೇಳಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಸಹಕಾರ ಇಲಾಖೆಯ ವತಿಯಿಂದ ಅಲಿ ಆಸ್ಕರ್ ರಸ್ತೆಯ ಸಹಕಾರ ಸಂಘಗಳ ನಿಬಂಧಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಹಕಾರ ಸಮೃದ್ಧಿ ಸೌಧ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
“ಪ್ರತಾಪ್ ಸಿಂಹ ಅವರಿಗೆ ರಾಜಕೀಯ ಪ್ರಬುದ್ಧತೆಯಿಲ್ಲ. ಇನ್ನೂ ಎಳಸು. ರಾಜಕೀಯ ಪಕ್ವತೆ ಬೆಳೆದಿಲ್ಲ. ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಬೆಂಗಳೂರು ಮತ್ತು ಮೈಸೂರು ದಶಪಥ ಹೆದ್ದಾರಿಯನ್ನು ತಾವೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಅವರು ಬೆಂಗಳೂರು ರಸ್ತೆಗೆ ಸಂಸದರೇ” ಎಂದು ಪ್ರಶ್ನಿಸಿದರು.
“ನನ್ನ ರಾಜಕೀಯ ಜೀವನದಲ್ಲಿ ಪ್ರತಿಪಕ್ಷದವರೊಂದಿಗೆ ಮಾತೂ ಆಡುವುದಿಲ್ಲ. ಅಧಿಕಾರದಲ್ಲಿದ್ದಾಗ ಅವರ ಮನೆಗೂ ಹೋಗುವುದಿಲ್ಲ. ಅವರೇನಾದರೂ ಬಂದರೆ ಸೌಜನ್ಯಕ್ಕಾಗಿ ಮಾತನಾಡುತ್ತೇನೆ. ಆದರೆ, ರಾಜಕೀಯ ಮಾತನಾಡುವುದಿಲ್ಲ” ಎಂದು ಸಿಂಹ ಆರೋಪವನ್ನು ತಳ್ಳಿ ಹಾಕಿದರು.
“ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅವರೇ ಹೇಳಬೇಕು. ಹೊಂದಾಣಿಕೆ ರಾಜಕಾರಣ ಮಾಡಿಕೊಂಡವರು ಯಾರು ಎಂದು ಅವರಿಗೆ ಗೊತ್ತಿರಬೇಕಲ್ವಾ?, ಮಾಹಿತಿ ಇದ್ದರೆ ಹೇಳಲಿ. ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ. ಯಾವ ತನಿಖೆ, ಯಾವಾಗ ಮಾಡಿಸಬೇಕು ಮತ್ತು ಯಾರಿಂದ ಮಾಡಿಸಬೇಕು ಅನ್ನೋದು ನಮಗೆ ಸೇರಿದ್ದು. ಯಾರೋ ಹೇಳಿದರೆಂದು ತನಿಖೆ ಮಾಡಿಸುವುದಿಲ್ಲ. ಸಮಯ ಬಂದಾಗ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ” ಎಂದರು.
‘