ಬೆಳಗಾವಿ: ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಇಂದು ಹಂಚಿಕೆಯಾಗಿದ್ದು, ನಿರೀಕ್ಷೆಯಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸತೀಶ ಜಾರಕಿಹೊಳಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಅವರು ಮೂರನೇ ಬಾರಿ ಜಿಲ್ಲಾ ಮಂತ್ರಿಯಾಗಿದ್ದಾರೆ. ಎರಡು ವರ್ಷದ ಬಳಿಕ ಬೆಳಗಾವಿ ಜಿಲ್ಲೆಯವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಜಿಲ್ಲೆಯ ಜನತೆಗೆ ಸಂತಸ ತಂದಿದೆ.
2020ರ ಫೆಬ್ರವರಿಯಲ್ಲಿ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಿದ್ದ ರಮೇಶ ಜಾರಕಿಹೊಳಿ ಮಾರ್ಚ್ 3, 2021ರಂದು ಸಿಡಿ ಪ್ರಕರಣ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಈ ಅವಧಿಯಲ್ಲಿ ಒಂದು ವರ್ಷ ಮಂತ್ರಿಯಾಗಿದ್ದ ರಮೇಶ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗೋವಿಂದ ಕಾರಜೋಳ ಅವರನ್ನು ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಸಚಿವರಾಗಿದ್ದರೂ ಕೂಡ ಬೇರೆ ಜಿಲ್ಲೆಯವರನ್ನೇ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವಲ್ಲಿ ರಮೇಶ ಜಾರಕಿಹೊಳಿ ಯಶಸ್ವಿಯಾಗಿದ್ದರು. ಅಲ್ಲದೇ, ಸಮ್ಮಿಶ್ರ ಸರ್ಕಾರ ಪತನದ ಬಳಿಕ ಆರಂಭದಲ್ಲಿ ರಮೇಶ ಸಂಪುಟಕ್ಕೆ ಸೇರುವ ಮೊದಲು ಜಗದೀಶ ಶೆಟ್ಟರ್ ಉಸ್ತುವಾರಿ ಸಚಿವರಾಗಿದ್ದರು. ನಂತರ ಬೊಮ್ಮಾಯಿ ಸರ್ಕಾರದಲ್ಲಿ ಶೆಟ್ಟರ್ ಸಚಿವರಾಗದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ಗೋವಿಂದ ಕಾರಜೋಳರ ಹೆಗಲಿಗೆ ಹಾಕಲಾಗಿತ್ತು. ಎರಡು ವರ್ಷದ ಬಳಿಕ ಬೆಳಗಾವಿ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಜಿಲ್ಲೆಯ ಜನತೆಯ ಸಂತಸಕ್ಕೆ ಕಾರಣವಾಗಿದೆ. ಯಾಕೆಂದರೆ ಬೇರೆ ಜಿಲ್ಲೆಯವರು ಅತಿಥಿಯವರಂತೆ ತಿಂಗಳು, ಎರಡು ತಿಂಗಳಿಗೊಮ್ಮೆ ಬೆಳಗಾವಿಗೆ ಬಂದು ಹೋಗುತ್ತಿದ್ದರಿಂದ ಜಿಲ್ಲೆಯ ಜನರ ಸಂಕಷ್ಟ ಆಲಿಸಲು ಯಾರೂ ಇಲ್ಲದ ಸ್ಥಿತಿಯಿತ್ತು.
ಜಾರಕಿಹೊಳಿ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸ್ಥಾನ ಮೀಸಲು: ಕಳೆದೊಂದು ದಶಕದಿಂದ ಬೆಳಗಾವಿ ಜಿಲ್ಲೆ ರಾಜಕಾರಣ ಆಳುತ್ತಿರುವ ಜಾರಕಿಹೊಳಿ ಸಹೋದರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಫಿಕ್ಸ್ ಆಗಿ ಬಿಟ್ಟಿದೆ. 2013ರಿಂದಲೂ ಈ ಕುಟುಂಬದವರೇ ಆಗಿದ್ದು, ಇವರ ಕುಟುಂಬಕ್ಕೆ ಸಚಿವ ಸ್ಥಾನ ಕೈ ತಪ್ಪಿದಾಗ ಬೇರೆ ಜಿಲ್ಲೆಯವರಿಗೆ ಮಣೆ ಹಾಕಲಾಗಿದೆ. ಇಷ್ಟರ ಮಟ್ಟಿಗೆ ಜಾರಕಿಹೊಳಿ ಕುಟುಂಬ ತನ್ನ ಪ್ರಭಾವ ಹೊಂದಿದೆ.
3ನೇ ಬಾರಿ ಸತೀಶ್‌ಗೊಲಿದ ಉಸ್ತುವಾರಿಗಿರಿ : 2004-05ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಧರ್ಮಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿ ಕೆಲಸ ಮಾಡಿದ್ದ ಸತೀಶ ಜಾರಕಿಹೊಳಿ, ಎರಡನೇ ಬಾರಿ 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮತ್ತ ಸಣ್ಣ ಕೈಗಾರಿಕೆ ಖಾತೆ ಸಚಿವರಾಗಿದ್ದರು. ನಂತರ 2018ರ ಡಿ.26ರಿಂದ ಜುಲೈ 23, 2019ರವರೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾಗಿಯೂ ಕೆಲಸ ಮಾಡಿದ್ದರು. ಇದರಲ್ಲಿ 2013ರಿಂದ 2016ರವರೆಗೆ ಮತ್ತು 2018ರಿಂದ 2019ರವರೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಇದೀಗ ಮೂರನೇ ಬಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗುವ ಮೂಲಕ ಸತೀಶ ಜಾರಕಿಹೊಳಿ ದಾಖಲೆ ಬರೆದಿದ್ದಾರೆ. ಇನ್ನು ರಮೇಶ ಜಾರಕಿಹೊಳಿ ಕೂಡ ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಧಾರವಾಡ ಜಿಲ್ಲೆ ಸಿಗುತ್ತೆ ಎನ್ನಲಾಗುತ್ತಿತ್ತು. ಈ ನಿಟ್ಟಿನಲ್ಲಿ ಅವರು ಬಹಳಷ್ಟು ಲಾಬಿ ಕೂಡ ಮಾಡಿದ್ದರು. ಆದರೆ, ಅಂತಿಮವಾಗಿ ಹೆಬ್ಬಾಳ್ಕರ್ಗೆ ದೂರದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ