ಬೆಂಗಳೂರು, ಮೇ 16- ರಾಜ್ಯಕ್ಕೆ ಹೊರರಾಜ್ಯ ಮತ್ತು ದೇಶಗಳಿಂದ ಬಂದವರೇ ಕಂಟಕರಾಗಿ ಪರಿಣಮಿಸಿದ್ದಾರೆ. ಇದುವರೆಗಿನ ಪ್ರಕರಣಗಳಲ್ಲಿ ಹೊರಗಡೆಯಿಂದ ಬಂದ ಪ್ರಯಾಣಿಕರಿಗೆ ಹೆಚ್ಚು ಕೊರೊನಾ ಸೋಂಕು ತಗುಲಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ.
ಗುಜರಾತ್‍ನಿಂದ ರಾಜ್ಯಕ್ಕೆ ಆಗಮಿಸಿದ 55 ಪ್ರಯಾಣಿಕರು, ಮುಂಬೈ ಮತ್ತು ಮಹಾರಾಷ್ಟ್ರದಿಂದ ಬಂದ 53, ರಾಜಸ್ತಾನದ 30, ದುಬೈನ 20, ಚೆನ್ನೈನ 4, ಒರಿಸ್ಸಾದ 2, ತೆಲಂಗಾಣದಿಂದ ಬಂದ 3 ಮಂದಿಗೆ ಹಾಗೂ ಲಂಡನ್‍ನಿಂದ ಬಂದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ.
ಲಾಕ್‍ಡೌನ್ ರಿಲೀಫ್ ನೀಡಿದ ನಂತರ ಹೊರಭಾಗದಿಂದ ಆಗಮಿಸುವವರಿಗೆ ಸರ್ಕಾರ ಅನುಮತಿ ನೀಡಿದ ನಂತರವೇ ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದು ಪತ್ತೆಯಾಗಿದೆ.
ಒಂದು ವಾರದಿಂದ ಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಚ್ಚಿ ಬೀಳಿಸಿದೆ.ಅಂತಾರಾಜ್ಯ ಮತ್ತು ವಿದೇಶದಿಂದ ಆಗಮಿಸಿರುವ ಪ್ರಯಾಣಿಕರಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಅವರನ್ನು ಕ್ವಾರಂಟೈನ್‍ನಲ್ಲಿಟ್ಟು ಚಿಕಿತ್ಸೆ ನೀಡುವುದು ದುರ್ಭರವಾಗಿದೆ.
ಪ್ರಯಾಣಕ್ಕೆ ಅನುಮತಿ ನೀಡಿದ ನಂತರವೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರ ಇನ್ನು ಮುಂದಾದರೂ ಲಾಕ್‍ಡೌನ್ ಸಂದರ್ಭದಲ್ಲಿ ಕಟ್ಟುನಿಟ್ಟಿನ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ.