ತುಮಕೂರು : ತುಮಕೂರು ಮತ್ತು ಶಿರಾ ನಡುವೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಓರ್ವ ಎಎಸ್‌ಐ ಸೇರಿ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರು ಆದೇಶ ಹೊರಡಿಸಿದ್ದಾರೆ.
ಕಳ್ಳಂಬೆಳ್ಳ ಠಾಣೆಯ ಎಎಸ್‌ಐ ಚಿದಾನಂದ ಸ್ವಾಮಿ ಹಾಗೂ ಪೊಲೀಸ್ ಜೀಪ್ ಚಾಲಕ ಚಿಕ್ಕಹನುಮಯ್ಯರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇವರು ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ಲಾರಿಗೆ 200, 300 ರೂಪಾಯಿ ವಸೂಲಿ ಮಾಡುತ್ತಿದ್ದರು. ಲಾರಿ ಚಾಲಕರಿಂದ ಹಣ ಪಡೆಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು.
ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರ ಲಂಚಬಾಕತನವನ್ನು ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.ಹಣ ವಸೂಲಿ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ವರದಿ ಕೊಡುವಂತೆ ಶಿರಾ ಪೊಲೀಸ್ ಇನ್ಸ್ಪೆಕ್ಟರ್ಗೆ ತುಮಕೂರು ಎಸ್ಪಿ ಸೂಚನೆ ನೀಡಿದ್ದರು.