Breaking News

ಕಾಂಗ್ರೆಸ್​ ಸೇರಿ ವಿಪಕ್ಷ ನಾಯಕನ ಸ್ಥಾನ ಕಳೆದುಕೊಂಡರಾ ಲಕ್ಷ್ಮಣ ಸವದಿ?

Spread the love

ಚಿಕ್ಕೋಡಿ: ರಾಜ್ಯ ರಾಜಕೀಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಅಥಣಿ ಶಾಸಕ ಲಕ್ಷ್ಮಣ ಸವದಿಯವರು ಕಮಲ ಬಿಟ್ಟು ಕೈ ಹಿಡಿದು ಕಡೆಗಣನೆಯಾದರಾ?

ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಕಟ್ಟಾ ಬಿಜೆಪಿ ನಾಯಕರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದ್ದ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಬಿಜೆಪಿಯಲ್ಲಿನ ತಮ್ಮ ಅವಕಾಶಗಳಿಗೆ ತಾವೇ ಫುಲ್​ಸ್ಟಾಪ್ ಹಾಕಿಸಿಕೊಂಡ್ರಾ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೌದು, ಪ್ರಮುಖವಾಗಿ ಕಮಲ ಪಡೆಯಲ್ಲಿ ರಾಜ್ಯ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸವದಿಯವರು ಪ್ರಭಾವಿ ರಾಜಕಾರಣಿ ಎಂಬ ಖ್ಯಾತಿ ಪಡೆದು ಬಿಜೆಪಿ ಪಕ್ಷಕ್ಕೆ ಆಕ್ಸಿಜನ್ ರೀತಿಯಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದರು. 2019ರಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡು, ಕೆಲ ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅದರಂತೆ, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಯಂಕೃತ ಅಪರಾಧದಿಂದ ಸೋಲಿನ ರುಚಿ ಕಂಡಿದ್ದರು. ಇದೇ ವೇಳೆ, ಅಥಣಿಗೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಆಯ್ಕೆಯಾಗಿದ್ದರು. ಆಯ್ಕೆಯಾದ ಒಂದು ವರ್ಷದಲ್ಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಮಹೇಶ್ ಕುಮಟಳ್ಳಿ ಪುನಃ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು. ಇದೀಗ ಮೇ 10ರಂದು ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡಿರುವ ಸವದಿಗೆ ಬಿಜೆಪಿ ಬಿಟ್ಟರೂ ಸಹ ದೊಡ್ಡ ಅಧಿಕಾರ ಇಲ್ಲದಂತಾಗಿದೆ.

 

ತಪ್ಪು ನಿರ್ಧಾರ ಕೈಗೊಂಡು ರಾಜಕೀಯ ಭವಿಷ್ಯಕ್ಕೆ ಕಂಟಕ ತಂದುಕೊಂಡರಾ ಸವದಿ? : ಈ ಬಾರಿಯ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರ ವೈಯಕ್ತಿಕ ವರ್ಚಸ್ಸು ಸಹ ಕೆಲಸ ಮಾಡಿರುವುದನ್ನು ಯಾರೂ ಮರೆಯುವಂತಿಲ್ಲ. ಆದರೆ, ಬದಲಾಗಿರುವ ಈಗಿನ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೊಂದಿಗೆ ಗಳಸ್ಯ – ಕಂಠಸ್ಯ ಎಂಬಂತಿದ್ದ ಸವದಿ, ಈಗ ದೂರಾಗಿರುವುದನ್ನು ನೋಡಿದರೆ ಅವರ ತೀರ್ಮಾನ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಬಿಜೆಪಿಯಲ್ಲಿ ಹಿರಿಯ ರಾಜಕಾರಣಿಯಾಗಿ ಅದರಲ್ಲೂ ರಾಜ್ಯಮಟ್ಟದ ನಾಯಕರಾಗಿ ಹಾಗೂ ಚುರುಕು ಮುಟ್ಟಿಸುವ ತಮ್ಮ ಮಾತಿನ ಶೈಲಿಯಿಂದ ಎಲ್ಲೆಡೆ ಹೆಸರುವಾಸಿಯಾಗಿರುವ ಸವದಿಯವರು ಬಿಜೆಪಿ ತೊರೆಯುವ ವಿಚಾರದಲ್ಲಿ ದುಡಿಕಿನ ನಿರ್ಧಾರ ತೆಗೆದುಕೊಂಡರಾ ಎಂಬ ಪ್ರಶ್ನೆ ಸದ್ಯಕ್ಕೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ತಾವು ಆಡಳಿತದಲ್ಲಿದ್ದಾಗಲೂ ವಿಪಕ್ಷಗಳನ್ನು ಕುಂದಿಸುವ ಸಾಮರ್ಥ್ಯ ಹೊಂದಿದ್ದ ಅವರಿಗೆ ಈ ಬಾರಿ‌ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಪಟ್ಟ ದೊರೆಯುವುದು ಪಕ್ಕಾ ಆಗಿತ್ತು.

ಕಾಂಗ್ರೆಸ್ ಸೇರಿದ ಚತುರ ಸವದಿ ಮೂಲೆಗುಂಪಾದ್ರಾ? : ಪ್ರಮುಖವಾಗಿ ಉತ್ತಮ ಮಾತುಗಾರಿಕೆ ಕೌಶಲ್ಯ ಹೊಂದಿರುವ ಸವದಿಯವರು ಬಿಜೆಪಿ ನಾಯಕರಿಗೆ ವಿಪಕ್ಷಗಳ ಬಾಯಿ ಮುಚ್ಚಿಸುವಲ್ಲಿ ಹಲವಾರು ಬಾರಿ ನೆರವಾಗಿದ್ದಾರೆ. ಆದರೆ, ಅದೇ ಸವದಿಯವರು ಕಾಂಗ್ರೆಸ್ ಪಕ್ಷವನ್ನು ಸೇರಿ ಯಡವಟ್ಟು ಮಾಡಿಕೊಂಡ್ರಾ? ಎಂಬ ಮಾತುಗಳು ಅವರ ಅಭಿಮಾನಿಗಳಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣವನ್ನು ನೋಡಿದಾಗ ಸಚಿವ ಸ್ಥಾನ ಕೈತಪ್ಪಿ ಲಕ್ಷ್ಮಣ ಸವದಿ ಕೇವಲ ಶಾಸಕರಾಗಿ ಮುಂದುವರಿಯುತ್ತಿರುವುದಾಗಿದೆ.

ಈಗಾಗಲೇ ಮೂರಂಕಿಯ ಕಮಲ ಪಡೆ ಈ ಚುನಾವಣೆಯಲ್ಲಿ ಎರಡಂಕಿಗೆ ಇಳಿದು ರಾಜ್ಯದ ಜನರೆದುರು ಮುಜುಗರಕ್ಕೀಡಾಗಿದೆ. ಒಂದೆಡೆ, ಸಮರ್ಥ ವಿಪಕ್ಷ ನಾಯಕನ ಕೊರತೆಯಿಂದ ಬಳಲುತ್ತಿರುವ ಕೇಸರಿ ಪಡೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಆದರೆ, ಯಾವುದೇ ಸೂಕ್ತ ಸ್ಥಾನಮಾನ ನೀಡದೇ ಕಾಂಗ್ರೆಸ್ ಪಕ್ಷದಲ್ಲಿ ಸವದಿಯವರನ್ನು ಮೂಲೆಗುಂಪು ಮಾಡಲಾಯಿತೇ? ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಬಲವಾಗಿ ಕೇಳಿ ಬರುತ್ತಿವೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ