ಹುಬ್ಬಳ್ಳಿ: ‘ಜೂನ್ 1ರಂದು ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಶೀಘ್ರದಲ್ಲೇ ರಾಜ್ಯದ ಜನರಿಗೆ ಒಳ್ಳೆಯ ಸುದ್ದಿ ಸಿಗಲಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಸಚಿವರಾದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಮಂಗಳವಾರ ಭೇಟಿ ನೀಡಿದ ಅವರು, ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಕಳೆದ ಬಾರಿ ಕಾರ್ಮಿಕ ಸಚಿವ ಸ್ಥಾನ ನೀಡಿದ್ದಾಗ ನನಗೆ ಕಡಿಮೆ ಸಮಯ ಸಿಕ್ಕಿತ್ತು. ಈಗ ಮತ್ತೆ ಅದೇ ಖಾತೆ ಸಿಕ್ಕಿರುವುದರಿಂದ ಹೆಚ್ಚು ಹೊಸ ಕಾರ್ಯಕ್ರಮಗಳನ್ನು ನೀಡುವ ಅವಕಾಶ ದೊರಕಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುವೆ’ ಎಂದರು.
‘ಕಾರ್ಮಿಕ ಕಲ್ಯಾಣ ನಿಧಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ’ ಎಂಬ ಆರೋಪದ ಕುರಿತ ಮಾಧ್ಯಮದವರ ಪ್ರಶ್ನೆಗೆ, ‘ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಉತ್ತರಿಸಿದರು.
ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಅನ್ವರ್ ಮುಧೋಳ, ಸದಾನಂದ ಡಂಗನವರ ಇದ್ದರು