ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ವೈದ್ಯರ ನಿಯೋಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಹುಬ್ಬಳ್ಳಿಯ ಗೃಹ ಕಛೇರಿಯಲ್ಲಿ ಭೇಟಿ ಮಾಡಿ, ಕೋವಿಡ್-19 ಕುರಿತು ಚರ್ಚಿಸಿದರು.
ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದು, ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಐಸಿಎಂಆರ್ ಕಿಮ್ಸ್‍ಗೆ ಅನುಮತಿ ನೀಡಿದೆ. ಹೀಗಾಗಿ ತಮ್ಮ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅವರ ನೇತೃತ್ವದ ತಂಡ ಗೃಹ ಸಚಿವರಿಗೆ ಸಲ್ಲಿಸಿದೆ. ಮನವಿಯನ್ನು ಸ್ವೀಕರಿಸಿ ಬಸವರಾಜ್ ಬೊಮ್ಮಾಯಿ ಅವರು ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿ, ಇದೇ ವೇಳೆ ಮಹಾಮಾರಿ ಕೋವಿಡ್-19 ಸಂದರ್ಭದಲ್ಲಿ ಕಿಮ್ಸ್ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 848ಕ್ಕೆ ಏರಿದ್ದು, ಭಾನುವಾರ ಒಂದೇ ದಿನ 54 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಧಾರವಾಡದಲ್ಲಿ 12 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 7 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಸದ್ಯ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.