ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಭಾಗದ ಶಿರಗೂರಿನಲ್ಲಿ ಅಸ್ವಸ್ಥ ಬಾಲಕನ ಮೈಯಲ್ಲಿ ದೆವ್ವ ಇದೆ ಎಂದು ಕುಟುಂಬಸ್ಥರನ್ನು ನಂಬಿಸಿ ಮಂತ್ರಿವಾದಿ ಓರ್ವ ಮನ ಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಾಜ್ ತಾಲ್ಲೂಕಿನ ಬಾಲಕ ಆರ್ಯನ್ ದೀಪಕ್ ಲಂಡ್ಗೆ (14) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಅಪ್ಪಾ ಸಾಹೇಬ್ ಕಾಂಬ್ಲೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ :
ಆರ್ಯನ್ ಕಳೆದ ಕೆಲವು ದಿನಗಳಿಂದ ತೀವ್ರ ಜ್ಷರದಿಂದ ಬಳಲುತ್ತಿದ್ದ. ಇನ್ನೂ ವೈದ್ಯರು ಹಾಗೂ ಆಯುರ್ವೇದದ ಔಷಧಿಗಳಿಗೂ ಆತ ಗುಣಮುಖನಾಗಿರಲಿಲ್ಲ. ಇದೇ ವೇಳೆ ಆರ್ಯನ್ ಕುಟುಂಬಸ್ಥರಿಗೆ ಸ್ನೇಹಿತರೊಬ್ಬರು ಮಂತ್ರವಾದಿ ಅಪ್ಪಾ ಸಾಹೇಬ್ ನನ್ನು ಭೇಟಿಯಾಗುವಂತೆ ಹೇಳಿದ್ದಾರೆ.ಸ್ನೇಹಿತನ ಮಾತನ್ನು ನಂಬಿದ ಕುಟುಂಬಸ್ಥರು ಅಸ್ವಸ್ಥ ಆರ್ಯನ್ನನ್ನು ಕರೆದುಕೊಂಡು ಶಿರಗೂರಿನಲ್ಲಿರುವ ಅಪ್ಪಾ ಸಾಹೇಬ್ನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆರೋಪಿಯೂ ಬಾಲಕನ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಕುಟುಂಬಸ್ಥರನ್ನು ನಂಬಿಸಿ ಆತನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಅಸ್ವಸ್ಥ ಬಾಲಕನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆರ್ಯನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.