Breaking News

ವಿಧಾನಸಭೆಗೆ ಸ್ಪೀಕರ್ ಯಾರು? ನಾಳೆ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ತೀರ್ಮಾನ:ಸಿದ್ದರಾಮಯ್ಯ

Spread the love

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಶಾಸಕಾಂಗ ಸಭೆ ಕರೆದಿದ್ದಾರೆ.

ವಿಧಾನಸಭೆ ಸದಸ್ಯರ ಪದಗ್ರಹಣ ಪ್ರಯುಕ್ತ ಮೂರು ದಿನಗಳ ಅಧಿವೇಶನ ಕರೆದಿರುವ ಸಿಎಂ ಕಡೆಯ ದಿನ ಬೆಳಗ್ಗೆ ಶಾಸಕಾಂಗ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಕೊಠಡಿ ಸಂ. 334 ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನ ಪರಿಷತ್​ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಉಪಸ್ಥಿತರಿರುತ್ತಾರೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಕಾಂಗ್ರೆಸ್‌ ಶಾಸಕಾಂಗ ಪಕ್ಷಕ್ಕೆ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರು ತಪ್ಪದೇ ಈ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರಿರುವ ಸಿದ್ದರಾಮಯ್ಯ, ಹಲವು ಮಹತ್ವದ ವಿಚಾರಗಳ ಬಗೆಗೂ ಚರ್ಚೆ ನಡೆಸಲಿದ್ದಾರೆ. ಅತ್ಯಂತ ಪ್ರಮುಖವಾಗಿ, ಸ್ಪೀಕರ್ ಆಯ್ಕೆ ನಡೆಯಲಿದೆ. ಯಾರನ್ನು ಸ್ಪೀಕರ್ ಆಗಿ ನೇಮಿಸಬೇಕು ಎಂಬ ಕುರಿತು ಶಾಸಕರ ಒಮ್ಮತದ ನಿಲುವು ಪಡೆಯಲು ನಿರ್ಧರಿಸಿದ್ದಾರೆ.

 ಪ್ರಕಟಣೆ ಪ್ರತಿಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿ ಕಾಂಗ್ರೆಸ್ ಪರವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಪಕ್ಷಕ್ಕೆ ಉತ್ತಮ ಸಂಖ್ಯಾಬಲ ಇರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನುಮಾನ. ಚುನಾವಣೆ ನಡೆಯಲಿ ಎಂಬ ಉದ್ದೇಶಕ್ಕೆ ಅಭ್ಯರ್ಥಿಯನ್ನು ಕಡೆ ಕ್ಷಣದಲ್ಲಿ ಕಣಕ್ಕಿಳಿಸಿದರೂ ಆಚ್ಚರಿ ಇಲ್ಲ.

ಸಾಮಾನ್ಯವಾಗಿ ಹಿರಿಯ ಸದಸ್ಯರಿಗೆ ಸ್ಪೀಕರ್ ಪಟ್ಟ ನೀಡುವುದು ವಾಡಿಕೆ. ಸದ್ಯ ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ಕಾರ್ಯ ನಿರ್ವಹಿಸುತ್ತಿದ್ದು ಅವರು ಪೂರ್ಣ ಪ್ರಮಾಣದ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಹಿಂದೇಟು ಹಾಕಿದ್ದಾರೆ. ಆರ್.ವಿ. ದೇಶಪಾಂಡೆ ಸೇರಿದಂತೆ ಸ್ಪೀಕರ್ ಸ್ಥಾನಕ್ಕೆ ಹೆಚ್​.ಕೆ.ಪಾಟೀಲ್ ಹಾಗೂ ಟಿ.ಬಿ.ಜಯಚಂದ್ರ ಅವರ ಹೆಸರುಗಳು ಕೇಳಿ ಬರುತ್ತಿವೆ. ಮೂವರು ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ಹಿನ್ನೆಲೆಯಲ್ಲಿ ಯಾರಾದರೂ ಒಬ್ಬರ ಮನವೊಲಿಸುವ ಕಾರ್ಯ ಶಾಸಕಾಂಗ ಸಭೆಯಲ್ಲಿ ನಡೆಯಲಿದೆ.

ಇದಲ್ಲದೆ ಜುಲೈ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ನೂತನ ಬಜೆಟ್ ಮಂಡನೆಗೆ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕ್ಷೇತ್ರವಾರು ಸಲಹೆ, ಸೂಚನೆಗಳನ್ನು ನೀಡುವಂತೆ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಲಿದ್ದಾರೆ. ವಿಧಾನಸಭೆ ಅಧಿವೇಶನ ಬಳಿಕ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿದ್ದು ಬಾಕಿ ಉಳಿದಿರುವ 24 ಸಚಿವ ಸ್ಥಾನಗಳಿಗೆ ಸೂಕ್ತ ಶಾಸಕರ ಆಯ್ಕೆ ಕಾರ್ಯ ಮಾಡಲಿದ್ದಾರೆ. ಹೈಕಮಾಂಡ್ ನಾಯಕರ ಮುಂದೆ ಎಲ್ಲ 135 ಶಾಸಕರ ಸರ್ವಸಮ್ಮತ ಅಭ್ಯರ್ಥಿಗಳ ಹೆಸರನ್ನು ನೀಡಬೇಕಿದ್ದು, ಶಾಸಕಾಂಗ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವ ನಿರೀಕ್ಷೆ ಇದೆ.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ