Breaking News
Glimpses of panoramic view on the occasion of 79th Independence Day celebrations at Red Fort, in Delhi on August 15, 2025.

77ನೇ ಗಣರಾಜ್ಯೋತ್ಸವ ಸಂಭ್ರಮ – ಈ ಬಾರಿಯ ವಿಶೇಷತೆಗಳೇನು?

Spread the love

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಿಸಿದ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಹೆಮ್ಮೆಯ ದಿನ. ಇದು ಕೇವಲ ಆಚರಣೆ ಅಲ್ಲ. ಸಂವಿಧಾನ ಜಾರಿಗೆ ಬಂದ ದಿನವನ್ನು ಗೌರವಿಸುವ ಅಭೂತಪೂರ್ವ ದಿನ.

1950 ಜನವರಿ 26ರಂದು ಭಾರತೀಯರೆಲ್ಲರೂ ಹೆಮ್ಮೆಯಿಂದ ಆಚರಿಸುವ ದಿನ. ರಾಜಪ್ರಭುತ್ವವನ್ನ ತ್ಯಜಿಸಿ ಪ್ರಜಾಪ್ರಭುತ್ವಕ್ಕೆ ಬದಲಾದ ದಿನ. ಹೀಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಈ ದಿನ ಅತ್ಯಂತ ಮಹತ್ವದ ದಿನ. ಈ ಬಾರಿ ಜನವರಿ 26ರಂದು ಭಾರತೀಯರೆಲ್ಲರೂ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಿದ್ದಾರೆ. ಈ ಬಾರಿ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ವಿಶೇಷತೆ ಏನು? ಪಥಾಸಂಚಲನ ಹೇಗಿರಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಗಣರಾಜ್ಯೋತ್ಸವ ದಿನದ ಮಹತ್ವ ಹಾಗೂ ಆಚರಣೆ:
1929 ರ ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಸೆಷನ್ ನಲ್ಲಿ ಜವಹಾರ್ ಲಾಲ್ ನೆಹರು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 26, 1930 ಕ್ಕೆ ದೇಶ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಅದನ್ನೇ ಪೂರ್ಣ ಸ್ವರಾಜ್ ದಿವಸ್ ಅಥವಾ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಘೋಷಣೆ ಮಾಡಲಾಗಿತು. ಆದರೆ ಇದು 1947 ವರೆಗೂ ಈಡೇರಲಿಲ್ಲ. ಆದ್ದರಿಂದ ನಿರ್ಣಯದಲ್ಲಿ ಕೈಗೊಂಡಂತೆ ಮೊದಲು ಆಚರಣೆ ಮಾಡಬೇಕೆಂದುಕೊಂಡಿದ್ದ ಸ್ವಾತಂತ್ರ್ಯ ದಿನದ ದಿನಾಂಕವಾದ ಜ.26 ರಂದೇ ಸಂವಿಧಾನವನ್ನು ಜಾರಿಗೊಳಿಸಲಾಯಿತು.

ಭಾರತವು ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ ನಡೆಸುವ ಆಡಳಿತವೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳನ್ನು ಪ್ರಭುಗಳೆಂದೇ ಭಾವಿಸುವ ದೇಶವು ಭಾರತವಾಗಿದೆ. 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಕೂಡ ನಮ್ಮ ದೇಶವು ಸಂವಿಧಾನವನ್ನು ಹೊಂದಿರಲಿಲ್ಲ. 26 ಜನವರಿ 1950 ರಂದು ಸಂವಿಧಾನವನ್ನು ಸ್ಥಾಪನೆ ಮಾಡಿದ ದಿನವಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ ಗಣರಾಜ್ಯ ಎಂದು ಘೋಷಿಸಲ್ಪಟ್ಟ ದಿನವಾಗಿದೆ. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್‌ 9ರಂದು ತನ್ನ ಮೊದಲ ಅಧಿವೇಶನ ನಡೆಸಿತ್ತು. ಕೊನೆಯ ಅಧಿವೇಶನ 1949ರ ನವೆಂಬರ್‌ 26ರಂದು ನಡೆದಿತ್ತು. ಡಾ.ಬಿ.ಆರ್.‌ ಅಂಬೇಡ್ಕರ್‌ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಒಂದು ವರ್ಷದ ಬಳಿಕ ಅಂಗೀಕರಿಸಲಾಯಿತು. ಹೀಗಾಗಿ 26 ಜನವರಿ 1950 ರಂದು ಸಂವಿಧಾನ ಜಾರಿಗೆ ಬಂದಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್​​ ಭಾರತದ ಬಾವುಟವನ್ನು ಹಾರಿಸಿ ಸಂವಿಧಾನ ಜಾರಿಗೆ ಬಂದ ದಿನವನ್ನು ಘೋಷಿಸಿದ್ದರು.

ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ, ಇಂಡಿಯಾ ಗೇಟ್‌ನಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುತ್ತದೆ. ಭಾರತದ ರಾಷ್ಟ್ರೀಯ ಸೇನೆಯನ್ನು ಒಳಗೊಂಡ ಪರೇಡ್, ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳು ಈ ಮೆರವಣಿಗೆಯಲ್ಲಿ ಕಣ್ಮನ ಸೆಳೆಯುತ್ತವೆ. ಈ ದಿನ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ನೀಡಲಾಗುತ್ತದೆ. ದೇಶದಾದಂತ್ಯ ಶಾಲೆ ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಸೇರಿದಂತೆ ಹಲವೆಡೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

Republic Day 2

ಈ ಬಾರಿಯ ಥೀಮ್:
ಈ ಬಾರಿ ಗಣರಾಜ್ಯೋತ್ಸವ ಆಚರಣೆಯು ‘ವಂದೇ ಮಾತರಂಗೆ 150 ವರ್ಷಗಳು’ ಎಂಬ ವಿಷಯದ ಮೇಲೆ ನಡೆಯಲಿದೆ. 1875ರಲ್ಲಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ವಿರಚಿತ ವಂದೇ ಮಾತರಂಗೆ ಇದೀಗ 150 ವರ್ಷಗಳ ಸಂಭ್ರಮ. ಈ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಂದೇ ಮಾತರಂನಿಂದ ಪ್ರೇರಿತವಾದ ಸಾಂಸ್ಕೃತಿಕ ಹಾಗೂ ಪ್ರದರ್ಶನಗಳು ಪಾಲ್ಗೊಳ್ಳಲು ಸೂಚಿಸಲಾಗಿದೆ.

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪಾಠ ಸಂಚಲನದಲ್ಲಿ ಭಾರತೀಯ ಸೇನೆಯು ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶಿಸಲಿದೆ. ಈ ವೇಳೆ ಮಿಲಿಟರಿ ಪ್ರದರ್ಶನ, ಆಧುನಿಕ ಶಸ್ತ್ರಾಸ್ತ್ರ, ಡ್ರೋನ್, ಟ್ಯಾಂಕರ್ ಗಳು ಮತ್ತು ಕ್ಷಿಪಣಿ ಸೇರಿದಂತೆ ಇನ್ನಿತರ ರಚನೆಯನ್ನು ಪ್ರದರ್ಶಿಸಲಿದೆ. ಜೊತೆಗೆ ಭಾರತೀಯ ಸೇನೆಯ ವಿವಿಧ ರಚನೆಯ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳು ಕೂಡ ಪಾಲ್ಗೊಳ್ಳಲಿದೆ. ಇನ್ನು ಭಾರತೀಯ ವಾಯುಪಡೆಯ ವಿಶೇಷ ನಿವೃತ್ತ ಸೈನಿಕರ ಟ್ಯಾಬ್ಲೋ ಕೂಡ ಇದರ ಭಾಗವಾಗಲಿದೆ.

ಗಣರಾಜ್ಯೋತ್ಸವದ ಅತಿಥಿ ಯಾರು?
ಜನವರಿ 26, 2026ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ.ಇದೇ ವೇಳೆ ರೈತರು, ವಿಜ್ಞಾನಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಮಹಿಳಾ ಸ್ವಸಹಾಯ ಗುಂಪು ಸದಸ್ಯರು, ಕುಶಲಕರ್ಮಿಗಳು, ಕಾರ್ಮಿಕರು, ಸ್ವಯಂಸೇವಕರು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 10,000 ಜನರು ವಿಶೇಷ ಅತಿಥಿಗಳಾಗಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

Republic Day 1

ಈ ಬಾರಿಯ ಪಥಸಂಚಲನದಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಇಲಾಖೆಗಳಿಂದ ಒಟ್ಟು 23 ಸ್ತಬ್ದ ಚಿತ್ರಗಳು ಭಾಗಿಯಾಗಲಿವೆ. ಈ ಮೂಲಕ ಭಾರತದ ಸಂಸ್ಕೃತಿ, ಪರಂಪರೆ, ನಾವಿನ್ಯತೆ ಮತ್ತು ಸ್ವಾವಲಂಬತೆಯನ್ನು ಪ್ರದರ್ಶಿಸಲಿದೆ. ಪಥಸಂಚಲನದಲ್ಲಿ ಸುಮಾರು 2500 ಕಲಾವಿದರು ಭಾಗಿಯಾಗಲಿದ್ದಾರೆ. ಇದೇ ವೇಳೆ ಕೆಂಪುಕೋಟೆಯಲ್ಲಿ ಭಾರತ ಪರ್ವ, ರಾಷ್ಟ್ರೀಯ ಶಾಲಾ ಬ್ಯಾಂಡ್ ಸ್ಪರ್ಧೆ, ಪ್ರಾಜೆಕ್ಟ್ ವೀರ್ ಗಾಥಾ 5.0 ಮತ್ತು ಪ್ರಧಾನಮಂತ್ರಿಯವರ NCC ರ್ಯಾಲಿ ನಡೆಯಲಿದೆ.

ಕರ್ನಾಟಕದ ಸ್ತಬ್ಧಚಿತ್ರ:
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ ಎಂಬ ಸ್ಥಬ್ಧಚಿತ್ರ ಕರ್ನಾಟಕವನ್ನು ಪ್ರದರ್ಶಿಸಲಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಪಯಣವನ್ನು ಸಂಕೇತಿಸುವ ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ ವಿಷಯದ ಮೇಲೆ ಈ ಬಾರಿ ಟ್ಯಾಬ್ಲೊ ಸಿದ್ಧಪಡಿಸಲಾಗಿದೆ.

Karnataka Tableau For Republic Day 2026 1 copy

ಈ ಸ್ತಬ್ಧಚಿತ್ರ ಕರ್ತವ್ಯಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗಿಯಾಗಲ್ಲ, ಬದಲಿಗೆ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ಪ್ರದರ್ಶಿಸಲಾಗುತ್ತಿದೆ. ಇತರೆ ರಾಜ್ಯಗಳಿಗೂ ಅವಕಾಶ ನೀಡುವ ದೃಷ್ಠಿಯಿಂದ ಕರ್ನಾಟಕದ ಟ್ಯಾಬ್ಲೋ ಅನ್ನು ಈ ಬಾರಿ ಪರೇಡ್ ನಿಂದ ಹೊರಗಿಡಲಾಗಿದೆ.

ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಿವೆ.

ಸ್ತಬ್ಧಚಿತ್ರದಲ್ಲಿ ಏನಿರಲಿದೆ?
ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿ ಮತ್ತು ಚಲನಶೀಲತೆಯ ಸಂಕೇತವಾಗಿ ಹೊಳೆಯುತ್ತಿದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸುತ್ತವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ.

Karnataka Tableau For Republic Day 2026 copy

ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‌ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ. ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ. ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ.

ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‌ಗಳ ಮಧ್ಯೆ ರೋಬೋಟ್‌ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ.

Republic Day 2ಅತಿಥಿಗಳ ಗ್ಯಾಲರಿಗೆ ನದಿಗಳ ಹೆಸರು:
ಕರ್ತವ್ಯ ಪಥದಲ್ಲಿ ನಡೆಯುವ ಸಮಾರಂಭದಲ್ಲಿ ಆಸನ ವ್ಯವಸ್ಥೆಯನ್ನು ದೇಶದ ಪ್ರಮುಖ ನದಿಗಳ ಹೆಸರಿನಲ್ಲಿ ಮಾಡಲಾಗಿದೆ. ಬಿಯಾಸ್, ಬ್ರಹ್ಮಪುತ್ರ, ಚಂಬಲ್, ಚೆನಾಬ್, ಗಂಡಕ್, ಗಂಗಾ, ಘಾಘ್ರಾ, ಗೋದಾವರಿ, ಸಿಂಧೂ ಮತ್ತು ಝೀಲಂ ಆವರಣಗಳ ಅತಿಥಿಗಳು ಉದ್ಯೋಗ ಭವನ ಮೆಟ್ರೋ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಕಾವೇರಿ, ಕೋಸಿ, ಕೃಷ್ಣ, ಮಹಾನದಿ, ನರ್ಮದಾ, ಪೆನ್ನಾರ್, ಪೆರಿಯಾರ್, ರವಿ, ಸನ್, ಸಟ್ಲೆಜ್, ತೀಸ್ತಾ, ವೈಗೈ ಮತ್ತು ಯಮುನಾ ಆವರಣಗಳ ಅತಿಥಿಗಳು ಕೇಂದ್ರ ಸಚಿವಾಲಯದ ಮೆಟ್ರೋ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ.

ಸುರಕ್ಷತಾ ದೃಷ್ಟಿಯಿಂದ AI ಕನ್ನಡಕ:
ಅಪರಾಧಿ ಹಿನ್ನೆಲೆಯ ವ್ಯಕ್ತಿಗಳು ಅಥವಾ ಕಳ್ಳತನದ ವಾಹನಗಳನ್ನ ಗುರುತಿಸಿದ ತಕ್ಷಣ ಅಲರ್ಟ್ ನೀಡುವ ಎಐ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಅದಕ್ಕಾಗಿ ಪೊಲೀಸರಿಗೆ ಎಐ ಸ್ಮಾರ್ಟ್‌ ಕನ್ನಡಕಗಳನ್ನ ನೀಡಲಾಗಿದೆ. ಗಣರಾಜ್ಯೋತ್ಸವ ದಿನದಂದು ಸುಮಾರು 10,000 ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುತ್ತದೆ. ಏರ್ ಸರ್ವೇಲೆನ್ಸ್‌ಗಾಗಿ ಆಂಟಿ-ಡ್ರೋನ್ ಯೂನಿಟ್‌ಗಳು ಮತ್ತು ಎತ್ತರದ ಕಟ್ಟಡಗಳ ಮೇಲೆ ಸ್ನೈಪರ್ ತಂಡಗಳನ್ನ ನಿಯೋಜಿಸಲಾಗಿದೆ. ಹೋಟೆಲ್‌ಗಳು, ಗೆಸ್ಟ್ ಹೌಸ್‌ಗಳು, ಬಾಡಿಗೆದಾರರು ಮತ್ತು ಗೃಹ ಸಹಾಯಕರ ಸಮಗ್ರ ಪರಿಶೀಲನೆ ನಡೆಯುತ್ತಿದೆ. ಪಾದಚಾರಿಗಳಿಗೆ ಕನಿಷ್ಠ 3 ಹಂತದ ತಪಾಸಣೆ (ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಸೇರಿದಂತೆ) ಮತ್ತು ವಾಹನಗಳಿಗೆ ಕಠಿಣ ತಪಾಸಣೆ ಮಾಡಲಾಗುತ್ತದೆ ಎಂದು ನವದೆಹಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹಲಾ ಅವರು ಹೇಳಿದ್ದಾರೆ.

REPUBLIC DAY 4

ಟಿಕೆಟ್‌ ಬುಕ್ಕಿಂಗ್‌ ಹೇಗೆ?
ಆಫ್‌ಲೈನ್ ಟಿಕೆಟ್ ಖರೀದಿ: ಜನವರಿ 2ರಿಂದ ಜನವರಿ 11ರವರೆಗೆ ನವದೆಹಲಿಯಾದ್ಯಂತ ಗೊತ್ತುಪಡಿಸಿದ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಈಗಾಗಲೇ ಟಿಕೆಟ್ ಖರೀದಿಸುವ ಅವಧಿ ಮುಗಿದುಹೋಗಿದೆ.

ಟಿಕೆಟ್ ಬೆಲೆ:
– ಕಳೆದ ವರ್ಷದ ಮಾಹಿತಿ ಆಧಾರದ ಮೇಲೆ ಜನವರಿ 26ರಂದು ಗಣರಾಜ್ಯೋತ್ಸವ ಮೆರವಣಿಗೆಯ ಟಿಕೆಟ್‌ಗಳು 20 ರೂ.ನಿಂದ ಆರಂಭವಾಗಲಿದ್ದು, ಪ್ರೀಮಿಯಂ ಟಿಕೆಟ್‌ಗಳು 100 ರೂ.ಗೆ ಲಭ್ಯವಿದೆ.

– ಬೀಟಿಂಗ್ ರಿಟ್ರೀಟ್ ಫುಲ್ ಡ್ರೆಸ್ ರಿಹರ್ಸಲ್ ಜನವರಿ 28ರಂದು ನಡೆಯಲಿದ್ದು, ಟಿಕೆಟ್ ಬೆಲೆ ರೂ. 20ರಿಂದ ಆರಂಭವಾಗಲಿದೆ.

– ಬೀಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29ರಂದು ನಡೆಯಲಿದ್ದು, ಟಿಕೆಟ್ ಬೆಲೆ 100 ರೂ. ಇರಲಿದೆ.

ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಲು, aamantran.mod.gov.in/login ಅಥವಾ rashtraparv.mod.gov.in ಗೆ ಭೇಟಿ ನೀಡಿ ಮತ್ತು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.


Spread the love

About Laxminews 24x7

Check Also

ಪ್ರಜಾಪ್ರಭುತ್ವ ಉಳಿವಿಗೆ ದೇಶದ ಜನ ಒಂದಾಗಿ: ಮಲ್ಲಿಕಾರ್ಜುನ ಖರ್ಗೆ

Spread the love ನವದೆಹಲಿ: ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಕೇಂದ್ರ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ