ಸರಳವಾಗಿ ಗೃಹಪ್ರವೇಶ ಮಾಡಿ 500 ಬಡವರಿಗೆ ರೇಷನ್ ಕಿಟ್ ವಿತರಿಸಿದ ಉದ್ಯಮಿ..!
ರೋಹಿತ್ ರಾವಳ್ ಅವರು ಬೆಳಗಾವಿ ನಗರದ 500 ಬಡವರಿಗೆ ಉಚಿತ ಪಡಿತರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ
ಬೆಳಗಾವಿ(ಮೇ.01): ಕೊರೋನಾ ಹರಡುವ ಭೀತಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಬಡವರ ಕಷ್ಟ ಹೇಳತೀರದಾಗಿದೆ. ದಿನಗೂಲಿ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದ ಬಡಪಾಯಿಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ 72 ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಆತಂಕ ಮನೆ ಮಾಡಿದೆ. ಬಡವರಿಗೆ, ದಿನಗೂಲಿ ನೌಕರರಿಗೆ ಹಲವು ಸರ್ಕಾರ, ಸಂಘ ಸಂಸ್ಥೆಗಳು ಸಹಾಯ ಮಾಡುತ್ತಿವೆ. ಬೆಳಗಾವಿಯಲ್ಲಿ ಉದ್ಯಮಿಯೊರ್ವ ತನ್ನ ಕನಸಿನ ಮನೆ ನಿರ್ಮಿಸಿ ಬಡವರಿಗೆ ರೇಷನ್ ಕಿಟ್ ನೀಡುವ ಮೂಲಕ ಅರ್ಥಪೂರ್ಣವಾಗಿ ಗೃಹಪ್ರವೇಶ ಮಾಡಿದ್ದಾರೆ.
ಬೆಳಗಾವಿಯ ಫುಲಬಾಗ್ ಗಲ್ಲಿ ನಿವಾಸಿ ರೋಹಿತ್ ರಾವಳ್, ಮೂರು ಅಂತಸ್ತಿನ ಭವ್ಯವಾದ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಮನೆ ಗೃಹ ಪ್ರವೇಶಕ್ಕೆ ತಮ್ಮ ಬಂಧು, ಸ್ನೇಹಿತರನನ್ನು ಆಹ್ವಾನಿಸಲು ನಿರ್ಧರಿಸಿದ್ದರು. ಆದರೇ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ಗೃಹ ಪ್ರವೇಶ ಮಾಡಿದ್ದಾರೆ. ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಂತ್ರ ಹೇಳಿವ ಮೂಲಕ ಗೃಹ ಪ್ರವೇಶ ಪೂಜೆ ನೆರವೇರಿಸಿದರು.
ಕಳೆದ 80 ವರ್ಷಗಳಿಂದ ಬೆಳಗಾವಿಯಲ್ಲಿ ರಾವಳ್ ಕುಟುಂಬ ವಾಸವಿದೆ. ಬೆಳಗಾವಿಯಲ್ಲಿ ವ್ಯಾಪಾರ ಮಾಡಿಕೊಂಡು ವಾಸವಿದ್ದ ಈ ಕುಟುಂಬ ಫುಲ್‌ಬಾಗ್ ಗಲ್ಲಿಯಲ್ಲಿ ಮೂರು ಅಂತಸ್ತಿನ ಭವ್ಯವಾದ ಮನೆ ಕಟ್ಟಿದ್ದಾರೆ. ನಿಗದಿಯಂತೆ ಇಂದು ಗೃಹ ಪ್ರವೇಶ ಕಾರ್ಯಕ್ರಮ ಮಾಡಿದ ಕುಟುಂಬಸ್ಥರು ಲಾಕ್‌ಡೌನ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಿಂಪಲ್ ಆಗಿ ಗೃಹಪ್ರವೇಶ ಮಾಡಿದ್ದಾರೆ. ಅದರ ಜೊತೆಗೆ ಬೆಳಗಾವಿ ನಗರದ 500 ಬಡವರಿಗೆ ಉಚಿತ ಪಡಿತರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ದಿನಗೂಲಿ ನೌಕರರು, ಬಡವರಿಗೆ ಆಸರೆಯಾಗಿದ್ದಾರೆ. ಬೆಳಗಾವಿ ನಗರದಲ್ಲಿ ವ್ಯಾಪಾರ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಕುಟುಂಬ ಮೂಲ ರಾಜಸ್ಥಾನವಾಗಿದ್ದರೂ ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಳಗಾವಿಯಲ್ಲಿ. ಬೆಳಗಾವಿ ಜನರ ಆಶೀರ್ವಾದದಿಂದ ಇಂದು ನಾನು ಮನೆ ಕಟ್ಟಿದ್ದು ಲಾಕ್‌ಡೌನ್ ನಿಂದ ಕಷ್ಟದಲ್ಲಿ ಇರುವ ಬಡವರಿಗೆ ಸಹಾಯ ಮಾಡಬೇಕೆಂದು ಗೃಹಪ್ರವೇಶ ಕಾರ್ಯಕ್ರಮ ನಿಮಿತ್ತ ಬಡವರಿಗೆ ರೇಷನ್ ಕಿಟ್ ವಿತರಿಸಿದ್ದೇನೆ ಎಂದು ರೋಹನ್ ರಾವಳ್ ಹೇಳಿದ್ದಾರೆ.