ಶಿವಮೊಗ್ಗ ನಗರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಕೋಟೆ ಮಾರಿಕಾಂಬಾ ದೇವಿಯ ಜಾತ್ರೆಯ ಸಂಭ್ರಮದ ನಡುವೆಯೇ, ನಗರದ ಹೊರವಲಯದ ಸೂಳೆಬೈಲಿನಲ್ಲಿ ಭೀಕರ ಕೊಲೆಯೊಂದು ನಡೆದಿದ್ದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಮೃತ ವಿದ್ಯಾರ್ಥಿ ಸಂಕೇತ್ (15) ಸೂಳೆಬೈಲು ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್ಸಿ ವ್ಯಾಸಂಗ ಮಾಡುತ್ತಿದ್ದನು.
ಶಿವಮೊಗ್ಗ ನಗರದ ಹೊರವಲಯದ ಸೂಳೆಬೈಲಿನಲ್ಲಿ ಈ ಘಟನೆ ನಡೆದಿದೆ.
ಶಾಲೆಯಲ್ಲಿ ವಿಶೇಷ ತರಗತಿ (Special Class) ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಂಕೇತ್ನ ಸ್ನೇಹಿತ ಗಿರೀಶ್ ಎಂಬುವವರ ಜೊತೆ ಕೆಲವು ವಿದ್ಯಾರ್ಥಿಗಳು ಜಗಳ ತೆಗೆದಿದ್ದರು. ಈ ಗಲಾಟೆಯನ್ನು ಬಿಡಿಸಲು ಹೋದ ಸಂಕೇತ್ ಮೇಲೆ ದುಷ್ಕರ್ಮಿಗಳು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.ನಾಲ್ವರು ಅಪ್ರಾಪ್ತರು ಸೇರಿ ಸಂಕೇತ್ನನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಂಕೇತ್ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರು ಅಪ್ರಾಪ್ತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಭೇಟಿ: ಶಿವಮೊಗ್ಗ ಎಸ್ಪಿ ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೊಲೆಯ ಹಿಂದೆ ಬೇರೆ ಯಾರಾದರೂ ಪ್ರಚೋದನೆ ನೀಡಿದ್ದಾರೆಯೇ ಅಥವಾ ಬೇರೆ ಏನಾದರೂ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಿಜಾತ್ರೆಗೆ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದ್ದು, ನಗರವು ಸಂಪೂರ್ಣ ಸಿಂಗಾರಗೊಂಡಿದೆ. ಈ ಸಮಯದಲ್ಲಿ ನಡೆದ ಕೊಲೆ ಪ್ರಕರಣವು ಜನರಲ್ಲಿ ಆತಂಕ ಮೂಡಿಸಿದೆ. ಸದ್ಯಕ್ಕೆ ಪರಿಸ್ಥಿತಿ ಪೊಲೀಸರ ಹತೋಟಿಯಲ್ಲಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಲಾಗಿದೆ.
Laxmi News 24×7