Breaking News

ದಯಾಮರಣ: ಸಾವಿನ ಮನೆಯತ್ತ ಹೊರಟ ಹರೀಶ್ ರಾಣಾಗೆ ಕಂಬನಿ ಮಿಡಿದ ಕುಟುಂಬ

Spread the love

ದೆಹಲಿ: ‘ಹೋದವರು ಹೋದರು. ಇನ್ನು ಎಷ್ಟು ಅತ್ತರೂ ಅವರು ವಾಪಸ್‌ ಬರಲ್ಲ. ಮುಂದಿನ ಕಾರ್ಯ ನೋಡಿ’ – ಸಾವಿನ ಮನೆಯಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತಿದು. ವಾಸ್ತವವನ್ನು ಅರ್ಥ ಮಾಡಿಕೊಂಡು, ಭವಿಷ್ಯದ ಬಗ್ಗೆ ಆಲೋಚಿಸಲು ಮನಸ್ಸನ್ನು ಸಜ್ಜುಗೊಳಿಸುವ ಇಲ್ಲವೇ, ಸಾಂತ್ವನ ಹೇಳುವ ಶಕ್ತಿ ಅದಕ್ಕಿದೆ.

ಆದರೆ, ಜೀವ ಇದ್ದವರನ್ನು ಸಾವಿನ ಮನೆಗೆ ಕಳುಹಿಸುವುದು ಹೇಗೆ? – ಇಂತಹದೊಂದು ಹೃದಯ ವಿದ್ರಾವಕ ಕ್ಷಣಕ್ಕೆ ಗಾಜಿಯಾಬಾದ್‌ನ ಹರೀಶ್‌ ರಾಣಾ ಅವರ ನಿವಾಸ ಸಾಕ್ಷಿಯಾಯಿತು.

13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್‌ನ ಹರೀಶ್‌ ರಾಣಾ ಎಂಬವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ ಕಳೆದವಾರವಷ್ಟೇ ಅನುಮತಿ ನೀಡಿದೆ. ಅದರಂತೆ ಹರೀಶ್‌ ಅವರಿಗೆ ಜೀವನದ ಜಂಜಾಟದಿಂದ ‘ಮುಕ್ತಿ’ ನೀಡುವ ವೈದ್ಯಕೀಯ ಪಕ್ರಿಯೆ ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಮುಂದಿನ ದಿನಗಳಲ್ಲಿ ನಡೆಯಲಿದೆ.

ಹರೀಶ್‌ ಅವರನ್ನು ಬಾರದ ಲೋಕಕ್ಕೆ ಕಳುಹಿಸಿಕೊಡುತ್ತಿರುವುದಕ್ಕೆ ತಂದೆ ಅಶೋಕ್‌ ರಾಣಾ ಅವರು ಕುಟುಂಬದವರ ಕ್ಷಮೆ ಕೋರಿದ್ದಾರೆ. ಮಗನನ್ನು ಕಳುಹಿಸಿಕೊಡಲು ಯಾರಿಗೂ ಇಷ್ಟವಿಲ್ಲ. ಆದರೂ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲೇಬೇಕಾಯಿತು ಎಂದು ಕಣ್ಣೀರಾಗಿದ್ದಾರೆ.

ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌ ವ್ಯಾಸಂಗ ಮಾಡುತ್ತಿದ್ದ ಹರೀಶ್ ಅವರು, 2013ರಲ್ಲಿ ತಾವು ವಾಸವಿದ್ದ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ಆಗಿನಿಂದಲೂ ಕೋಮಾದಲ್ಲಿದ್ದ ಅವರು, ಹಾಸಿಗೆಯಲ್ಲೇ ಇಲ್ಲಿಯವರೆಗೆ ಕಾಲ ದೂಡಿದ್ದರು.

13 ವರ್ಷದಿಂದ ಕೋಮಾದಲ್ಲಿರುವ ವ್ಯಕ್ತಿಯ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿಆಳ-ಅಗಲ: ದಯಾಮರಣಕ್ಕೆ ಕಾನೂನು ಬಲ
ಇದೀಗ ಅವರಿಗೆ, ನೋವಿನ ವಿದಾಯ ಹೇಳಲು ಕುಟುಂಬದವರು, ಆಪ್ತರು ಸಜ್ಜಾಗಿದ್ದಾರೆ. ಇಂದು ಅವರನ್ನು ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅದಕ್ಕೂ ಮುನ್ನ, ಗಾಜಿಯಾಬಾದ್‌ನ ಬ್ರಹ್ಮಕುಮಾರಿ ಕೇಂದ್ರ ‘ಪ್ರಭು ಮಿಲನ ಭವನ’ದ ಕುಮಾರಿ ಲವ್ಲೀ ಅವರು, ಮಂದಹಾಸ ಬೀರುತ್ತಾ ಹರೀಶ್ ಹಣೆಗೆ ತಿಲಕವಿಟ್ಟು ಹಣೆ ನೇವರಿಸಿ ಮಾತನಾಡುವ 22 ಸೆಕೆಂಡುಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಹೊರಡುವ ಸಮಯ ಬಂದಿದೆ. ಎಲ್ಲರನ್ನೂ ಕ್ಷಮಿಸು, ಹಾಗೆಯೇ ಎಲ್ಲರಲ್ಲೂ ಕ್ಷಮೆ ಯಾಚಿಸು. ಶಾಂತಿ ಪ್ರಾಪ್ತಿಯಾಗಲಿ’ ಎಂದು ಕುಮಾರಿ ಲವ್ಲೀ ಹೇಳಿದ್ದಾರೆ. ಆ ಮಾತುಗಳನ್ನು ಅರ್ಥಮಾಡಿಕೊಂಡವರಂತೆ, ಕಣ್ಣು ಮಿಟುಕಿಸುವ ಹರೀಶ್‌, ಏನನ್ನೇ ಹೇಳಲು ಪ್ರಯತ್ನಿಸುವಂತೆ ಕಾಣುತ್ತಾರೆ. ಆ ವೇಳೆ, ಅವರ ಗಲ್ಲ ಅಲುಗಾಡುವುದು ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡುತ್ತದೆ.

‘ಹರೀಶ್‌ ರಾಣಾ ಕುಟುಂಬಕ್ಕಿದು ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಪ್ರೀತಿಪಾತ್ರರು ಪ್ರಾಣಕಳೆದುಕೊಳ್ಳುವುದು ಕುಟುಂಬದವರ ಪಾಲಿಗೆ ಬಹಳ ನೋವು ನೀಡುತ್ತದೆ’ ಎಂದು ಬ್ರಹ್ಮ ಕುಮಾರಿ ಅವರು ಮಾಧ್ಯಮದವರಿಗೆ ಹೇಳಿದ್ದಾರೆ.

ಹರೀಶ್‌ ಅವರ ಕುಟುಂಬವು ‘ಪ್ರಭು ಮಿಲನ ಭವನ’ದೊಂದಿಗೆ ಬಹಳ ಹಿಂದಿನಿಂದಲೂ ಒಡನಾಟ ಹೊಂದಿದೆ.

ಹರೀಶ್‌ ಅವರನ್ನು ಉಳಿಸಿಕೊಳ್ಳಲು ಕೊನೇ ಕ್ಷಣದವರೆಗೂ ಹೋರಾಡಿ ಅಸಹಾಯಕ ಸ್ಥಿತಿ ತಲುಪಿರುವ ಕುಟುಂಬ, ಆಯಂಬುಲೆನ್ಸ್‌ ಮನೆಯಿಂದ ಹೊರಡುತ್ತಿದ್ದಂತೆ ಕಣ್ಣೀರಾಯಿತು. ತಾಯಿ, ತಂಗಿ ಮತ್ತು ತಮ್ಮ ಹರೀಶ್‌ಗಾಗಿ ಕಂಬನಿ ಮಿಡಿದರು.

ಇದೇ ವೇಳೆ ಮಾತನಾಡಿದ ಹರೀಶ್‌ ಅವರ ತಂದೆ ಅಶೋಕ್‌ ರಾಣಾ ಹಾಗೂ ತಾಯಿ ನಿರ್ಮಲಾ, ಇಷ್ಟು ಸುದೀರ್ಘ ವೈದ್ಯಕೀಯ ಹಾಗೂ ಕಾನೂನಾತ್ಮಕ ಹೋರಾಟದ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದರು.

‘ನಮ್ಮ ಕುಟುಂಬದ ಆಪ್ತರು, ಸಂಬಂಧಿಕರು, ವೈದ್ಯರು ಹಾಗೂ ನಮಗಾಗಿ ನ್ಯಾಯಾಲಯದಲ್ಲಿ ವಾದಿಸಿದ ವಕೀಲರು, ನೆರವಾದ ಎಲ್ಲರಿಗೂ ಧನ್ಯವಾದಗಳು. ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಋಣಿಯಾಗಿರುತ್ತೇವೆ’ ಎಂದು ಅಶೋಕ್‌ ಭಾವುಕರಾದರು.


Spread the love

About Laxminews 24x7

Check Also

ಏಕರೂಪ ನಾಗರಿಕ ಸಂಹಿತೆ ಜಾರಿಗೆ ‘ಸುಪ್ರೀಂ’ ಅಸ್ತು

Spread the loveನವದೆಹಲಿ: ದೇಶಾದ್ಯಂತ `ಏಕರೂಪ ನಾಗರಿಕ ಸಂಹಿತೆ’ ಜಾರಿಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ದೇಶದ ಎಲ್ಲಾ ಮಹಿಳೆಯರಿಗೆ ಸಮಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ