ಬೆಂಗಳೂರು: ‘ಆರ್ಥಿಕತೆಯ ಗಂಧಗಾಳಿ ಗೊತ್ತಿಲ್ಲದಂತೆ ವರ್ತಿಸುವ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಅವಧಿಗೆ ಬಜೆಟ್ ಮಂಡಿಸಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡುತ್ತಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯ ಅವರೇ, ಕೈಗಾರಿಕೆ ಹಾಗೂ ಉತ್ಪಾದನಾ ಕ್ಷೇತ್ರದ ವೃದ್ಧಿಗೆ ಸಹಕಾರ ನೀಡದೆ ಇದ್ದರೆ ದೇಶದ ಪ್ರಗತಿ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಅವರೇ, ಕೃಷಿ ಭೂಮಿ ಖರೀದಿ ಮಿತಿಗೆ ವಿನಾಯಿತಿ ನೀಡುವಾಗ ನೀವು ಯಾವ ಉದ್ಯಮಿಗಳ ಒತ್ತಡಕ್ಕೆ ಮಣಿದಿದ್ದಿರಿ? ಅದು ರಾಜ್ಯ ಮಾರಾಟ ಮಾಡುವ ಪ್ರಯತ್ನ ಎನ್ನಲು ಸಾಧ್ಯವೇ?’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
‘ರಾಷ್ಟ್ರೀಯ ಪೈಪ್‌ಲೈನ್ ಯೋಜನೆಯ ಬಗ್ಗೆ ರಾಷ್ಟ್ರದ ಜನರನ್ನು ಕಾಂಗ್ರೆಸ್ ಪಕ್ಷ ತಪ್ಪು ದಾರಿಗೆ ಎಳೆಯುತ್ತಿದೆ. ಕೃಷಿ ಭೂಮಿ ಮಾರಾಟಕ್ಕೆ ದೇವರಾಜ ಅರಸು ಕಾಲದಲ್ಲಿ ವಿಧಿಸಿದ್ದ ಮಿತಿಯನ್ನು ಸಡಿಲಿಸಿದ ಸಿದ್ದರಾಮಯ್ಯ ಅವರೇ, ಕೈಗಾರಿಕೆ ಮತ್ತು ಉದ್ಯಮ ಬೆಳವಣಿಗೆಯ ಪರ ನಿಲ್ಲುವುದು ಏಕೆ ತಪ್ಪು?’ ಎಂದು ಬಿಜೆಪಿ ಕಿಡಿಕಾರಿದೆ.