Breaking News

ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ, ಒಂದು ವಾರ ಕೆಲಸ ನಿಲ್ಲಿಸಿ ಪ್ರತಿಭಟನೆ: ಮಂಜುನಾಥ್ ಎಚ್ಚರಿಕೆ

Spread the love

ಬೆಂಗಳೂರು: ಗುತ್ತಿಗೆದಾರರಿಗೆ  38 ಸಾವಿರ ಕೋಟಿ ಬಾಕಿ ಇದೆ. ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಮಾ.5 ರಂದು ಬೃಹತ್ ಪ್ರತಿಭಟನೆ ಮಾಡ್ತಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಚಾಮರಾಜಪೇಟೆ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ ಇದೆ. ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಯಶಸ್ವಿಯಾಗಿ ಎರಡೂವರೆ ವರ್ಷ ಪೂರೈಸಿದ್ದಾರೆ. ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಸಿಎಂಗೆ ಹಲವು ಬಾರಿ ಮನವಿ ಮಾಡಿದ್ರೂ ಸರ್ಕಾರ ಬಗೆಹರಿಸಿಲ್ಲ. ಲೋಕೋಪಯೋಗಿ ಇಲಾಖೆ, ಜಿಬಿಎ, ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ. ಚಿಕ್ಕಬಳ್ಳಾಪುರದ ಗುತ್ತಿಗೆದಾರ ಮುನೇಗೌಡ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. 25 ಲಕ್ಷ ಬಾಕಿ ಕೊಟ್ಟಿಲ್ಲ ಅಂತ ಬ್ಯಾಂಕ್‌ನವರು ಮನೆ ಬಳಿ ಬಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ, ಜಿಬಿಎನಲ್ಲಿ ಮಾತ್ರ ಜೇಷ್ಠತೆ ಪಾಲನೆ ಮಾಡಲಾಗುತ್ತಿದೆ. ವಿವಿಧ ಇಲಾಖೆ ಸಚಿವರಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಗುತ್ತಿಗೆದಾರರ ಸಮಸ್ಯೆಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತಿಲ್ಲ. ಈಗಾಗಲೇ ಸಿಎಂಗೆ 100 ಪುಟಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 10 ಮಹಾನಗರ ಪಾಲಿಕೆಗಳಲ್ಲಿ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಟೆಂಡರ್ ಅನುಮೋದನೆ ಹಾಗೂ ಹಣ ಬಿಡುಗಡೆ ಮಾಡುವಲ್ಲಿ ಹಿಂದಿನ ಸರ್ಕಾರಕ್ಕಿಂತ ಅಸ್ತವ್ಯಸ್ತವಾಗಿದೆ. ವಸತಿ ಇಲಾಖೆಯಲ್ಲಿ ಒಂದು ವರ್ಗವೇ ಗುತ್ತಿಗೆ ಕೊಡಿಸುವ ಕೆಲಸ ಮಾಡುತ್ತಿದೆ. ಕೂಡಲೇ ಗುತ್ತಿಗೆದಾರರ ಸಭೆ ಕರೆಯುವಂತೆ ಸಿಎಂಗೆ ಆಗ್ರಹಿಸಿದರು.

ಗುತ್ತಿಗೆದಾರರ ಸಮಸ್ಯೆ ಈಡೇರಿಸದಿದ್ದರೆ ಫೆಬ್ರವರಿಯಿಂದ ಕೆಲಸ ಸ್ಥಗಿತ ಮಾಡಲಾಗುವುದು. ನಗರಾಭಿವೃದ್ಧಿಯಲ್ಲಿ ಖ.ಖಿ. ನಗರ, ರಾಜಾಜಿನಗರದಲ್ಲಿ ಏಜೆಂಟ್‌ಗಳು ಕಚೇರಿ ಮಾಡಿಕೊಂಡಿದ್ದಾರೆ. ಏಜೆಂಟ್‌ಗಳು ತಮ್ಮ ಕಚೇರಿಗೆ ಇಲಾಖೆ ಮುಖ್ಯ ಇಂಜಿನಿಯರ್‌ರನ್ನು ತಮ್ಮ ಕಚೇರಿಗೆ ಕರೆಸಿಕೊಳ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದರು. ಮಾರ್ಚ್ 5 ರಂದು ಬೃಹತ್ ಪ್ರತಿಭಟನೆ ಮಾಡ್ತಾ ಇದ್ದೇವೆ. ಒಂದು ವಾರ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆಗೆ ಪತ್ರ ಬರೆಯಲು ಮುಂದಾಗಿದ್ದೇವೆ. ಮಾರ್ಚ್ ಒಳಗಡೆ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಪಾಲರಿಗೂ ಕೂಡ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಕಳೆದ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಪರ್ಸೆಂಟೇಜ್ ಜಾಸ್ತಿ ಆಗಿದೆ. ಎಲ್ಲಾ ಇಲಾಖೆಯಲ್ಲೂ ಹಣ ಬಿಡುಗಡೆಗೆ ಜಾಸ್ತಿ ತಗೋಳ್ತಾರೆ. 40%, 60%, 80% ಅಂತಾ ಹೇಳಲ್ಲ. ಆದರೆ ಹಣ ಬಿಡುಗಡೆಗೆ ಹೆಚ್ಚು ಪರ್ಸಂಟೇಜ್ ಇದೆ. ಅದನ್ನ ನಾವು ಬಹಿರಂಗ ಪಡಿಸುತ್ತೇವೆ. ಪಿಡಬ್ಲ್ಯೂಡಿ ಇಲಾಖೆ ಲಾಸ್ಟ್ ಇದ್ದ ಪರ್ಸಂಟೇಜ್ ಅಷ್ಟೇ, ನೀರಾವರಿ ಇಲಾಖೆಯಲ್ಲೂ ಅಷ್ಟೇ ಇದೆ. ಕೆಲವು ಇಲಾಖೆ ಜಾಸ್ತಿ ಆಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರಾಭಿವೃದ್ಧಿ ಇಲಾಖೆ ಅಷ್ಟೇ ಅಲ್ಲ, ವಸತಿ ಇಲಾಖೆಯಲ್ಲೂ ಕೂಡ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಪರೇಟ್ ಆಫೀಸ್‌ಗಳನ್ನ ಮಾಡಿಕೊಂಡು ಮಧ್ಯವರ್ತಿ ಮಾಡ್ತಾ ಇದ್ದಾರೆ. ಹೇಳಿದ ಹಾಗೇ ಕೇಳದೇ ಇದ್ರೆ ಟೆಂಡರ್ ಕ್ಯಾನ್ಸಲ್ ಮಾಡ್ತೇವೆ ಅಂತಾರೆ. ಇದನ್ನೆಲ್ಲ ರಾಹುಲ್ ಗಾಂಧಿ ಮುಂದೆ ಹೇಳುತ್ತೇವೆ ಎಂದರು. ಕೂಡಲೇ ಸಿಎಂ ಜತೆ ಕರೆಯಬೇಕು. ಒಂದು ವೇಳೆ ಸಭೆ ಕರೆಯಲಿಲ್ಲ ಅಂದ್ರೆ ದಾಖಲೆ ಬಿಡುಗಡೆ ಮಾಡುತ್ತೇವೆಂದು ಎಚ್ಚರಿಸಿದರು.

ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಏಳು ಸಚಿವರಿಂದ ಗುತ್ತಿಗೆದಾರರಿಂದ ಸಮಸ್ಯೆ ಆಗ್ತಿದೆ. ಅನ್ಯಾಯ ಆಗ್ತಿದೆ, ಎಲ್ಲರ ಗಮನಕ್ಕೆ ತಂದಿದ್ದೇವೆ ಸರಿಪಡಿಸಿಲ್ಲ. ಭಾರೀ ಅನ್ಯಾಯ ಆಗ್ತಿದೆ. ಏಳು ಸಚಿವರಿಂದ ಅನ್ಯಾಯ ಆಗ್ತಿದೆ. ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಟೆಂಡರ್ ವಿಚಾರವಾಗಿ ಭಾರಿ ಅನ್ಯಾಯ ಆಗ್ತಿದೆ. ಸಚಿವರೇ ಟೆಂಡರ್ ಕ್ಯಾನ್ಸಲ್ ಮಾಡಿಸ್ತಾ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಯಾವ್ಯಾವ ಇಲಾಖೆಯಿಂದ ಎಷ್ಟೆಷ್ಟು ಬಾಕಿ?
ಲೋಕೋಪಯೋಗಿ ಇಲಾಖೆ: 8,370.76 ಕೋಟಿ
ಜನಸಂಪನ್ಮೂಲ ಇಲಾಖೆ: 13,000 ಕೋಟಿ
ಆರ್.ಡಿ.ಪಿ.ಆರ್.: 3800 ಕೋಟಿ
ಸಣ್ಣ ನೀರಾವರಿ ಇಲಾಖೆ: 3000 ಕೋಟಿ
ನಗರಾಭಿವೃದ್ಧಿ ಇಲಾಖೆ: 2000 ಕೋಟಿ
ವಸತಿ ಮತ್ತು ವಕ್ಫ್ ಇಲಾಖೆ: 2600 ಕೋಟಿ
ಕಾರ್ಮಿಕ ಇಲಾಖೆ: 2000 ಕೋಟಿ
ಜಿಬಿಎ: 2600 ಕೋಟಿ
ಒಟ್ಟು ಬಾಕಿ 37,370.76 ಕೋಟಿ


Spread the love

About Laxminews 24x7

Check Also

ಶಿಡ್ಲಘಟ್ಟ ಕೇಸ್‌ನಲ್ಲಿ ಕಾನೂನಿನಂತೆ ಕ್ರಮ: ಬೈರತಿ ಸುರೇಶ್

Spread the love ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್  ಮುಖಂಡ ರಾಜೀವ್ ಗೌಡನನ್ನ ಸರ್ಕಾರ ರಕ್ಷಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ