ಬೆಂಗಳೂರು: ಶಿಕ್ಷಕರು ಮಕ್ಕಳಿಗೆ ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಕಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ, ಧನ್ಯತಾ ಸಮರ್ಪಣೆ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.
ಶಿಕ್ಷಕರು ದೇಶದ ಭವಿಷ್ಯ ರೂಪಿಸುವವರು. ಒಂದು ಕಾಲದಲ್ಲಿ ಶಿಕ್ಷಣ 12-15% ಮಾತ್ರ ದೇಶದಲ್ಲಿ ಇತ್ತು. 74% ಇವತ್ತು ಸಾಕ್ಷರತೆ ಇದೆ. ಗುಣಮಟ್ಟದ ಶಿಕ್ಷಣ ಸಿಕ್ಕಿದೆ. ಸಮಸ್ಯೆಗೆ ಸ್ಪಂದಿಸೋ ಶಿಕ್ಷಣ ಸಿಕ್ಕಿದೆಯಾ ಅಂತ ನೋಡಬೇಕು. ವ್ಯವಸ್ಥೆ ಪರಿಣಾಮವಾಗಿ ಹೀಗೆ ಆಗಿದೆ. ಜಾತಿ ವ್ಯವಸ್ಥೆ ಸಮಾಜದಲ್ಲಿ ಭದ್ರವಾಗಿ ನೆಲೆಯಾಗಿದೆ. ಹೀಗಾಗಿ ಶಿಕ್ಷಣದಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ. ನೆಹರು ಅವರು ತರಗತಿಯಲ್ಲಿ ಭವಿಷ್ಯ ರೂಪಿತ ಆಗೋದು ಅಂತ ಹೇಳಿದ್ದರು. ಶಿಕ್ಷಣ ಪಡೆದ ವ್ಯಕ್ತಿ ಎಂತಹ ಶಿಕ್ಷಣ ಪಡೆಯಬೇಕು ಅಂತ ಯೋಚನೆ ಮಾಡಬೇಕು. ಸಂವಿಧಾನದಲ್ಲಿ ನಮಗೆ ಎಂತಹ ಶಿಕ್ಷಣ ಸಿಗಬೇಕು ಅಂತ ಹೇಳುತ್ತದೆ ಎಂದು ತಿಳಿಸಿದರು.
ವೈಜ್ಞಾನಿಕ, ವೈಚಾರಿಕ ಶಿಕ್ಷಣ ಸಿಗಬೇಕು. ನಮ್ಮದು ಜಾತಿ ವ್ಯವಸ್ಥೆ, ಮೌಢ್ಯಗಳಿಂದ ಕೂಡಿರೋ ಸಮಾಜ. ಕಂದಾಚಾರ ಆಚರಣೆ ಮಾಡೋ ಸಮಾಜ. ಇದೆಲ್ಲವನ್ನೂ ದೂರ ಮಾಡೋ ಶಿಕ್ಷಣ ಪಡೆಯಬೇಕು. ಸಮಾಜ ಬದಲಾವಣೆ ಆಗಬೇಕು. ಬದಲಾವಣೆ ಆಗಬೇಕಾದ್ರೆ ಅಸಮಾನತೆ ಹೋಗಬೇಕು. ಅಂಬೇಡ್ಕರ್ ಈ ಬಗ್ಗೆ ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಹೇಳಿದ್ದರು. ಸ್ವಾತಂತ್ರ್ಯ ಬಂದಿದೆ ನಮಗೆ. ಸ್ವಾತಂತ್ರ್ಯ ಯಶಸ್ವಿಯಾಗಬೇಕಾದ್ರೆ ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಸಿಗಬೇಕು ಅಂತ ಅಂಬೇಡ್ಕರ್ ಹೇಳಿದ್ದರು. ಶಿಕ್ಷಕರು ವೈಚಾರಿಕತೆ, ವೈಜ್ಞಾನಿಕತೆ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಸಾಮಾನ್ಯರನ್ನ ಅಸಾಮಾನ್ಯರನ್ನಾಗಿ ಮಾಡೋ ಶಕ್ತಿ ಇರೋದು ಶಿಕ್ಷಕರಿಗೆ ಅಂತ ಅಬ್ದುಲ್ ಕಲಾಂ ಹೇಳಿದ್ರು. ಹುಟ್ಟಿನಿಂದ ನಾವು ದಡ್ಡರಲ್ಲ. ಕೆಳವರ್ಗದಿಂದಲೂ, ಸಾಮಾನ್ಯ ವರ್ಗದಿಂದ ಶಿಕ್ಷಕರು ಬಂದಿದ್ದಾರೆ. ದೇಶವನ್ನು ಸುಭದ್ರವಾಗಿ ನಿರ್ಮಿಸೋ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
3ಹೆಚ್ ಮಹತ್ವದ ಬಗ್ಗೆ ಗಾಂಧಿ ಹೇಳ್ತಾರೆ. ಬುದ್ದಿ, ಕರುಣೆ, ಕೌಶಲ್ಯದ ಬಗ್ಗೆ ಗಾಂಧಿ ಹೇಳ್ತಾರೆ. ಈ ಮೂರು ಮಿಡಿತ ಆದಾಗ ಮಾತ್ರ ವಿಕಾಸ ಆಗೋಕೆ ಸಾಧ್ಯ. ಯಾವುದೇ ಜಾತಿ, ಧರ್ಮ, ಭಾಷೆ ಮಾತಾಡೋದನ್ನ ನಾನು ಪ್ರೀತಿ ಮಾಡ್ತೀನಿ. ಶಿಕ್ಷಕರನ್ನ ನಾನು ಹೆಚ್ಚು ಗೌರವದಿಂದ ಕಾಣುತ್ತೇನೆ. ಶಾಲಾ ಶಿಕ್ಷಕರಿಗೆ ಹೆಚ್ಚು ಗೌರವ ಕೊಡುತ್ತೇನೆ. ಎಂತಹ ಸ್ಥಾನದಲ್ಲಿ ಇದ್ದೀವಿ ನೋಡಿ ನಾವು ಎಂದರು.
ರಾಜಪ್ಪ ಅನ್ನೋ ಮೇಷ್ಟ್ರು ಇಲ್ಲದೇ ಹೋಗಿದ್ರೆ ನಾನು ಲಾಯರ್ ಆಗ್ತಿರಲಿಲ್ಲ. ಸಿಎಂ ಕೂಡಾ ಆಗ್ತಾ ಇರಲಿಲ್ಲ ಗೌರವಕ್ಕೆ ಅರ್ಹವಾದ ವ್ಯಕ್ತಿ ಯಾರು ಅಂದರೆ ಶಿಕ್ಷಕರು. ಶಿಕ್ಷಕರನ್ನ ಪ್ರೀತಿ, ಗೌರವದಿಂದ ಕಾಣ್ತೀನಿ .ದೊಡ್ಡ ಬೇಡಿಕೆ ಪಟ್ಟಿ ಸಂಘ ಕೊಟ್ಟಿದೆ. ಕೆಲವು ಈಡೇರಿಕೆ ಮಾಡಿದ್ದೇವೆ. ಇನ್ನು ಕೆಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಕೆ ಮಾಡ್ತೀನಿ. ಹಿಂದೆ ನಾನು ಹಣಕಾಸು ಮಂತ್ರಿ ಆದಾಗ ಗೋವಿಂದಗೌಡ್ರಿಗೆ ಪ್ರತಿ ವರ್ಷ 20 ಸಾವಿರ ಶಿಕ್ಷಕರ ನೇಮಕ ಮಾಡೋಣ ಅಂತ ಹೇಳಿದ್ದೆ. 5 ವರ್ಷದಲ್ಲಿ 1 ಲಕ್ಷ ಹುದ್ದೆ ಭರ್ತಿ ಮಾಡಿದ್ವಿ.ಸರ್ಕಾರಿ ನೌಕರರ ಪೈಕಿ 50% ನೀವೇ ಇದ್ದೀರಾ. 6 ಮತ್ತು 7ನೇ ವೇತನ ಜಾರಿ ಮಾಡಿದ್ದೇನೆ. ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪದವೀಧರ ಶಿಕ್ಷಕರಿಗೆ ಬಡ್ತಿ ವೇತನ ಕೊಡೋ ಪ್ರಯತ್ನ ಮಾಡುತ್ತೇನೆ ಅಂತ ಭರವಸೆ ಕೊಟ್ಟರು.
ಮೌಢ್ಯವನ್ನ ಶಿಕ್ಷಕರು ಆಚರಣೆ ಮಾಡಬಾರದು. ನಿಮ್ಮ ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ನಡವಳಿಕೆ ಶುದ್ಧವಾಗಿ ಇರಬೇಕು. ಪ್ರಾಥಮಿಕ ಶಿಕ್ಷಕರ ನಡವಳಿಕೆ ಮಕ್ಕಳು ಪಾಲನೆ ಮಾಡುತ್ತಾರೆ. ಮಕ್ಕಳಿಗೆ ವೈಜ್ಞಾನಿಕ, ವೈಚಾರಿಕತೆ ಕಲಿಸಿ. ಆಗ ಸುಭದ್ರ ದೇಶ ನಿರ್ಮಾಣ ಆಗುತ್ತದೆ.ನಿಮ್ಮ ಬೇಡಿಕೆ ಈಡೇರಿಸೋಣ. ಆದ್ರೆ ನಿಮ್ಮ ಕೆಲಸ ನೀವು ಮಾಡಿ. ನೀವು ಏನು ಮಾಡಬೇಕು ಅಂತ ಹೇಳೋಕೆ ಬಂದಿದ್ದೇವೆ. ಎನ್ಪಿಎಸ್ – ಓಪಿಎಸ್ ಬಗ್ಗೆ ಚರ್ಚೆ ಮಾಡಿ, ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಅಂತ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ಗೆ ಸಂಘದಿಂದ ಬೆಳ್ಳಿ ಗಧೆ ಕೊಟ್ಟು ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ ಸೇರಿ ಹಲವರು ಉಪಸ್ಥಿತಿ ಇದ್ದರು.
Laxmi News 24×7