ಬೆಳಗಾವಿಯಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿದ ಪೆಟ್ರೋಲ್ ಕಳ್ಳರ ಗ್ಯಾಂಗ್! ಲಾಂಗು, ಮಚ್ಚು ಹಿಡಿದು ರಸ್ತೆಯಲ್ಲೇ ಅಟ್ಟಹಾಸ ಮೆರೆಯುತ್ತಾ ಬೈಕ್ ಗಳ ಪೆಟ್ರೋಲ್ ಕದಿಯುತ್ತಿದ್ದಾರೆ. ಹೌದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಯ ಸಮೀಪವೇ ಈ ಕಳ್ಳರ ಗ್ಯಾಂಗ್ ಅಟ್ಟಹಾಸ ಮೆರೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗಾವಿಯ ಹನುಮಾನ ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲ್ ಕಳ್ಳರ ಗ್ಯಾಂಗ್ ಒಂದು ಸರಣಿ ಕಳ್ಳತನಕ್ಕೆ ಯತ್ನಿಸಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪೆಟ್ರೋಲ್ ದರ ಏರಿಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಕ್ರಿಯವಾಗಿರುವ ಈ ಖದೀಮರು, ಮುಖಕ್ಕೆ ಮಾಸ್ಕ್ ಧರಿಸಿ ಕೈಯಲ್ಲಿ ಮಾರಕಾಸ್ತ್ರಗಳಾದ ಲಾಂಗು ಮತ್ತು ಪೆಟ್ರೋಲ್ ತುಂಬಲು ಬಾಟಲಿಗಳನ್ನು ಹಿಡಿದು ಬೀದಿಗಿಳಿದಿದ್ದಾರೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿರುವ ಇವರು, ಪೆಟ್ರೋಲ್ ಮತ್ತು ಡೀಸೆಲ್ ಕದಿಯಲು ಹವಣಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಯ ಸಮೀಪವೇ ಇಂತಹ ಘಟನೆ ನಡೆದಿರುವುದು ಸ್ಥಳೀಯರ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕಳ್ಳರ ಗ್ಯಾಂಗ್ ಅಟ್ಟಹಾಸದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ದ್ವಿಚಕ್ರ ವಾಹನಗಳಷ್ಟೇ ಅಲ್ಲದೆ, ಕಾರುಗಳ ಟ್ಯಾಂಕ್ಗೂ ಕನ್ನ ಹಾಕಲು ಯತ್ನಿಸುತ್ತಿರುವ ಈ ಖದೀಮರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
Laxmi News 24×7