17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಆಗಿದೆ. ಈ ಸಿನಿಮೋತ್ಸವಕ್ಕೆ ನಟ ಪ್ರಕಾಶ್ ರಾಜ್ ಅವರು ರಾಯಭಾರಿ ಆಗಿದ್ದಾರೆ. ಉದ್ಘಾಟನಾ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ‘ಸುಮಾರು 16 ವರ್ಷಗಳ ಹಿಂದೆ ಈ ಸಿನಿಮೋತ್ಸವವನ್ನು ನಾನು ಉದ್ಘಾಟನೆ ಮಾಡಿದ್ದೆ. ಆಗ ಒಂದು ಚೈತನ್ಯ ಇತ್ತು. ರಂಗನತಿಟ್ಟಿಗೆ ಬೇರೆ ಬೇರೆ ದೇಶದ ಹಕ್ಕಿಗಳು ಬರುವ ರೀತಿಯಲ್ಲಿ ಉತ್ಸವ ಆಗಬೇಕು ಎಂಬ ಚೈತನ್ಯದಿಂದ ಶುರುಮಾಡಿದ ಉತ್ಸವ ಇದು. 16 ವರ್ಷದ ಬಳಿಕ ನಟನಾಗಿ, ನಿರ್ಮಾಪಕನಾಗಿ, ವಿತರಕನಾಗಿ ಈಗ ಚಲನಚಿತ್ರೋತ್ಸವದ ರಾಯಭಾರಿ ಆಗಿ ನಿಮ್ಮ ಮುಂದೆ ನಿಂತಿದ್ದೇನೆ. ಒಂದು ಅನುಭವ ಹಂಚಿಕೊಳ್ಳುತ್ತೇನೆ’ ಎಂದು ಪ್ರಕಾಶ್ ರಾಜ್ ಅವರು ಮಾತು ಆರಂಭಿಸಿದರು.
‘ಮೊನ್ನೆ ಒಂದು ಅಂತಾರಾಷ್ಟ್ರೀಯ ಸಾಹಿತ್ಯ ಉತ್ಸವಕ್ಕೆ ಹೋಗಿದ್ದೆ. ಅಲ್ಲಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬಂದರು. ಮಕ್ಕಳು, ಯುವಕರು ಅವರನ್ನು ನೋಡುವ ಕಾತರದಲ್ಲಿ ಇದ್ದರು. ಅವರಿಗೆ ಒಂದು ಮಾತು ಕೇಳಿದೆ. ಮೇಲಿಂದ ಈ ಭೂಮಿ ನೋಡಿದರೆ ಏನು ಎನಿಸುತ್ತದೆ ಅಂತ ಕೇಳಿದೆ. ಅಲ್ಲಿಂದ ಭೂಮಿ ಪುಟ್ಟದು ಎನಿಸುತ್ತದೆ. ಅಲ್ಲಿ ಮನುಷ್ಯರ ಜನಸಂಖ್ಯೆ ಕಡಿಮೆ. ಬೇರೆ ಎಲ್ಲ ಪ್ರಾಣಿಗಳದ್ದು ಈ ಭೂಮಿ. ಆದರೆ ಮನುಷ್ಯರು ಯಾಕೆ ಜಗಳ ಆಡುತ್ತಿದ್ದಾರೆ ಎನಿಸಿತು ಅಂತ ಅವರು ಹೇಳಿದರು’ ಎಂದಿದ್ದಾರೆ ಪ್ರಕಾಶ್ ರಾಜ್.
‘ಮಾನವೀಯ ಬಾಂಧವ್ಯ ಬೆಳೆಯಲು ಈ ರೀತಿಯ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ಕಾರಣ ಆಗುತ್ತವೆ. ಆದರೆ ಇತ್ತೀಚೆಗೆ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ರಾಜಕೀಯ ಪ್ರವೇಶ ಮಾಡಿದೆ. ಇದರಿಂದ ಪ್ಯಾಲೆಸ್ತೀನ್ ಸಿನಿಮಾಗಳನ್ನು ಪ್ರದರ್ಶನ ಮಾಡಲು ನಮ್ಮ ಕೇಂದ್ರ ಸರ್ಕಾರ ಬಿಡುತ್ತಿಲ್ಲ. ಮುಖ್ಯಮಂತ್ರಿಗಳಾದ ನೀವು ಇದರ ಬಗ್ಗೆ ಒಂದು ದೊಡ್ಡ ನಿಲುವು ತೆಗೆದುಕೊಳ್ಳಬೇಕು ಅಂತ ರಾಯಭಾರಿಯಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ’ ಎಂದು ಪ್ರಕಾಶ್ ರಾಜ್ ಹೇಳಿದರು.
‘ನಮ್ಮ ಮಣ್ಣಿನ ಕಥೆಯಾದ ಎದೆಯ ಹಣತೆ ಪುಸ್ತಕ ಬೇರೆ ಭಾಷೆಗೆ ತರ್ಜುಮೆ ಆಗಿ ಬೂಕರ್ ಪ್ರಶಸ್ತಿ ಬಂದರೆ ನಾವು ಸಂಭ್ರಮಿಸುತ್ತೇನೆ. ನಮ್ಮ ನೆಲಕ್ಕೆ ಇನ್ನೊಬ್ಬರ ಕಥೆಯನ್ನು ತರೋಕೆ ಆಗಲ್ಲ ಎಂಬುದನ್ನು ಹೇಗೆ ಒಪ್ಪಿಕೊಳ್ಳೋಕೆ ಸಾಧ್ಯ? ಮೊನ್ನೆ ಕೇರಳದ ಸರ್ಕಾರ ಮುಂದೆ ನಿಂತು, ಪ್ರದರ್ಶನಗಳಿಗೆ ಅನುವು ಮಾಡಿಕೊಟ್ಟಿದೆ. ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ನಿಮ್ಮ ರಾಜಕೀಯ ಹುನ್ನಾರ ನಡೆಯೋದಿಲ್ಲ ಎಂಬುದನ್ನು ಕರ್ನಾಟಕ ಸರ್ಕಾರ, ಚಲನಚಿತ್ರ ಅಕಾಡೆಮಿ ಪ್ರತಿಭಟಿಸಬೇಕು ಅಂತ ನಾನು ರಾಯಭಾರಿಯಾಗಿ ಒತ್ತಾಯಿಸುತ್ತೇನೆ’ ಎಂದಿದ್ದಾರೆ ಪ್ರಕಾಶ್ ರಾಜ್.
‘ನನ್ನ ನೋವುಗಳಿಗೆ ನಾವು ಸುರಿಸುವ ಕಣ್ಣೀರಿನ ಪರಿಚಯ ನಮ್ಮ ಕೆನ್ನೆಗೆ ಇದ್ದರೆ ಸಾಲದು. ಇನ್ನೊಬ್ಬರ ನೋವಿಗೂ ನಾವು ಅಳುವ ಕಣ್ಣೀರಿನ ಪರಿಚಯವನ್ನು ನಮ್ಮ ಕೆನ್ನೆಗಳಿಗೆ ಮಾಡಿಸಿದರೆ ಮಾತ್ರ ನಾವು ಮನುಷ್ಯರು. ನೀವು ಪ್ಯಾಲೆಸ್ತೀನ್ ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸೋಕೆ ಬಿಡದೇ ಇದ್ದರೆ ನಾನು ಈ ವೇದಿಕೆಯಲ್ಲಿ ಅಲ್ಲಿನ ನೋವಿನ ಪದ್ಯವನ್ನು ಓದುತ್ತೇನೆ. ಆ ಮೂಲಕ ನನ್ನ ಪ್ರತಿರೋಧ ವ್ಯಕ್ತಪಡಿಸುತ್ತೇನೆ’ ಎಂದು ಪ್ರಕಾಶ್ ರಾಜ್ ಹೇಳಿದರು.
Laxmi News 24×7