Breaking News

IPL‌ ಆಡಳಿತ ಮಂಡಳಿ ಸಭೆ: ವೇಳಾಪಟ್ಟಿ, ಸರಕಾರದ ಒಪ್ಪಿಗೆ ಸಾಧ್ಯತೆ

Spread the love

ಮುಂಬಯಿ: ಐಪಿಎಲ್‌ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ.

ಸೆ. 19ರಿಂದ ನ. 8ರವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್‌ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ.

ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಮುಖ್ಯವಾಗಿ ಚೀನದ ಸ್ಪಾನ್ಸರ್‌ಶಿಪ್‌ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ. ಹಾಗೆಯೇ ಸರಕಾರದ ಒಪ್ಪಿಗೆ ಪಡೆಯಲು ಮುಂದಡಿ ಇಡಬೇಕಿದೆ.

ವೇಳಾಪಟ್ಟಿ
ಕೂಟದ ದಿನಾಂಕ ಈಗಾಗಲೇ ಅಂತಿಮಗೊಂಡಿದೆ. ಆದರೆ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕು. ಇದು ಖಚಿತಗೊಂಡರೆ ಫ್ರಾಂಚೈಸಿಗಳಿಗೆ ಎಲ್ಲ ರೀತಿಯ ಸಿದ್ಧತೆ ಆರಂಭಿಸಲು ಅನುಕೂಲವಾಗುತ್ತದೆ. ಯುಎಇ ಯಲ್ಲಿರುವ 3 ಮೈದಾನಗಳಲ್ಲಿ ಪಂದ್ಯಗಳನ್ನು ಆಯೋ ಜಿಸಲು ಫ್ರಾಂಚೈಸಿಗಳಿಗೆ ಪೂರ್ವಸಿದ್ಧತೆ ಅನಿವಾರ್ಯ.

ನೀತಿ, ನಿಯಮಗಳು
ಎಲ್ಲ ಫ್ರಾಂಚೈಸಿಗಳಿಗೆ ಹಾಗೂ ಬಿಸಿಸಿಐಗೆ ಇರುವ ದೊಡ್ಡ ತಲೆನೋವು ಕೋವಿಡ್ 19. ಸಾಮಾನ್ಯವಾಗಿ ಐಪಿಎಲ್‌ ನಡೆಸಲು ಬಿಸಿಸಿಐ ತನ್ನದೇ ಆದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್‌ಒಪಿ) ಹೊಂದಿರುತ್ತದೆ. ಈಗ ಕೋವಿಡ್ 19 ಇರುವುದರಿಂದ ಅದಕ್ಕೆ ತಕ್ಕಂತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ.

ಜೈವಿಕ ಸುರಕ್ಷಾ ವಲಯ, ಯುಎಇಯ ಏಕಾಂತವಾಸದ ನಿಯಮ, ಅಭ್ಯಾಸ ಹಾಗೂ ಪಂದ್ಯದ ವೇಳೆ ಎಷ್ಟು ಜನರಿಗೆ ಒಟ್ಟಿಗೆ ಇರಬಹುದು, ಕೂಟದ ವೇಳೆ ಬಿಸಿಸಿಐನ ವೈದ್ಯರ ಮಾತೇ ಅಂತಿಮವೇ ಅಥವಾ ಫ್ರಾಂಚೈಸಿಗಳ ಪ್ರತ್ಯೇಕ ವೈದ್ಯರಿಗೆ ಅಧಿಕಾರವಿರುತ್ತದೆಯೇ… ಇಂತಹ ಹಲವು ಪ್ರಶ್ನೆಗಳು ಫ್ರಾಂಚೈಸಿಗಳ ಮುಂದಿವೆ.

ವಿದೇಶಿ ಆಟಗಾರರ ಲಭ್ಯತೆ?
ಟಿ20 ವಿಶ್ವಕಪ್‌ ರದ್ದಾಗುತ್ತಿದ್ದಂತೆಯೆ ಎಲ್ಲ ದೇಶಗಳಲ್ಲಿ ಟಿ20 ಲೀಗ್‌ ದಿಢೀರನೆ ಆರಂಭವಾಗಿವೆ. ಆದ್ದರಿಂದ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಸಮಯಕ್ಕೆ ಸರಿಯಾಗಿ ಲಭ್ಯರಾಗುವುದು, ಅವರು ಯುಎಇಯ ಕೋವಿಡ್ 19 ನಿಯಮಗಳನ್ನು ದಾಟಿ ಆಟಕ್ಕೆ ಸಜ್ಜಾಗುವುದು… ಇವೆಲ್ಲ ವಿಮರ್ಶಿಸಬೇಕಾದ ಸಂಗತಿಗಳಾಗಿವೆ.
ವಿಂಡೀಸ್‌ ಆಟಗಾರರು ಸೆ. 10ಕ್ಕೆ ಸಿಪಿಎಲ್‌ ಮುಗಿಸಿ ಐಪಿಎಲ್‌ಗೆ ಬರಬೇಕು. ಹಾಗೆಯೇ ಚೊಚ್ಚಲ ಲಂಕಾ ಪ್ರೀಮಿಯರ್‌ ಲೀಗ್‌ ಇದೆ.

ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವೆ ಸೀಮಿತ ಓವರ್‌ಗಳ ಸರಣಿ ಮುಗಿಯುವುದೇ ಸೆ. 15ಕ್ಕೆ. ಅವರು ಅದೇ ದಿನ ಯುಇಎಗೆ ಬಂದರೂ ಕನಿಷ್ಠ ಒಂದು ವಾರ ಕೂಟಕ್ಕೆ ಲಭ್ಯರಿರುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ 19 ಹೆಚ್ಚಿರುವುದರಿಂದ ಅಲ್ಲಿ ವಿಮಾನಗಳನ್ನು ನಿಷೇಧಿಸಲಾಗಿದೆ. ಆಫ್ರಿಕಾ ಆಟಗಾರರನ್ನು ಕರೆಸಿಕೊಳ್ಳಲು ಏನು ದಾರಿ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಬೇಕಾಗಿದೆ.

ಕುಟುಂಬಕ್ಕೆ ಅವಕಾಶ ನೀಡಬೇಕೇ?
ಬಹುಮುಖ್ಯವಾಗಿರುವ ಇನ್ನೊಂದು ಪ್ರಶ್ನೆಯೆಂದರೆ, ಆಟಗಾರರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನು ಒಯ್ಯಲು ಅವಕಾಶವಿದೆಯೇ ಎನ್ನುವುದು. ಕೋವಿಡ್ 19ನಿಂದಾಗಿ ಈ ಪ್ರಶ್ನೆ ಉದ್ಭವಿಸಿದೆ. ಕುಟುಂಬದವರನ್ನು ಒಯ್ಯದಿದ್ದರೆ 2 ತಿಂಗಳಿಗೂ ದೀರ್ಘ‌ಕಾಲ ಆಟಗಾರರು ಪರಿವಾರದ ಸದಸ್ಯರಿಂದ ದೂರವಿರಬೇಕಾಗುತ್ತದೆ ಎನ್ನುವುದು ಒಂದು ಸಮಸ್ಯೆ. ಒಯ್ದರೆ ಕುಟುಂಬ ಸದಸ್ಯರು ಯುಎಇಯ ಹೊಟೇಲ್‌ ಕೊಠಡಿಗಳಲ್ಲಿ ಬಂಧಿಗಳಾಗಬೇಕಾಗುತ್ತದೆ ಎನ್ನುವ ಇಕ್ಕಟ್ಟು! ಈ ಬಗ್ಗೆ ರವಿವಾರದ ಸಭೆಯಲ್ಲಿ ಬಿಸಿಸಿಐ ಖಚಿತ ಉತ್ತರ ಕಂಡುಕೊಳ್ಳಬೇಕಾಗಿದೆ.


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ