ಮಂಡ್ಯ: ತಮ್ಮ ಮನೆಯ ಹಿತ್ತಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವ ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಬೂಕನಕೆರೆ ಹೋಬಳಿಯ ಬಳ್ಳೆಕೆರೆ ನಾಟನಹಳ್ಳಿಯ ಜೇಟ್ ಕುಂಟಣ್ಣನ ಬೋರೇಗೌಡರ ಮಗ ಮಂಜೇಗೌಡ(45) ಬಂಧಿತ ಆರೋಪಿಯಾಗಿದ್ದು ಇದೇ ಗ್ರಾಮದ ಮತ್ತೊಬ್ಬ ಆರೋಪಿ ರಾಜೇಗೌಡ ಬಿನ್ ಲೇಟ್ ಈರೇಗೌಡ(58) ತಲೆ ಮರೆಸಿಕೊಂಡಿದ್ದಾನೆ.
ಘಟನೆಯ ವಿವರ: ಆರೋಪಿಗಳಾದ ಮಂಜೇಗೌಡ ಮತ್ತು ರಾಜೇಗೌಡ ಅವರು ತಮ್ಮ ವಾಸದ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ಬಿ.ನಾಟನಹಳ್ಳಿ ಗ್ರಾಮದ ಆರೋಪಿಗಳ ಮನೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳಾದ ಮಂಜೇಗೌಡ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ.
ಆದರೆ ಆತ ತಪ್ಪಿಸಿಕೊಳ್ಳದಂತೆ ಸುತ್ತುವರಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಜೇಗೌಡನನ್ನು ಹಿಡಿಯುವ ಸಂದರ್ಭದಲ್ಲಿ ಎಚ್ಚೆತ್ತ ಮತ್ತೊಬ್ಬ ಆರೋಪಿ ರಾಜೇಗೌಡ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಬಂಧಿತ ಆರೋಪಿ ಮಂಜೇಗವಡ ತನ್ನ ಹಿಂಭಾಗದಲ್ಲಿರುವ ಸರ್ವೆ ನಂ 7/6ರಲ್ಲಿರುವ ತೆಂಗು ಮತ್ತು ಅಡಿಕೆ ಫಸಲಿನ ನಡುವೆ ಸುಮಾರು 6 ಕೆಜಿ 450 ಗ್ರಾಂ ತೂಕದ ಎರಡು ಗಾಂಜಾ ಗಿಡಗಳನ್ನು ಬೆಳೆದಿದ್ದು ಪೋಲಿಸರು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ರಾಜೇಗೌಡ ತನ್ನ ವಾಸದ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ ಸುಮಾರು 9 ಕೆಜಿ 800 ಗ್ರಾಂ ತೂಕದ ಎರಡು ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಒಟ್ಟು 16 ಕೆಜಿ 250 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.