ಬೆಂಗಳೂರು: ರೈಲ್ವೆ ಹಳಿಯ ಮೇಲೆ ವೃದ್ಧೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತನಿಖೆಯ ವೇಳೆ ವೃದ್ಧೆಯನ್ನು ಕೊಲೆ ಮಾಡಿ ಮೃತ ದೇಹವನ್ನು ರೈಲ್ವೆ ಟ್ರಾಕ್ ಮೇಲೆ ಹಾಕಿರುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಾಲಚಂದ್ರನನ್ನು ಸದ್ಯ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಲು ಬಾಲಚಂದ್ರನಿಗೆ ಸಹಕರಿಸಿದ ಆರೋಪಿ ಲತಾ ಪರಾರಿಯಾಗಿದ್ದು, ಆಕೆಗಾಗಿ ಶೋಧಕಾರ್ಯ ನಡೆಯುತ್ತಿದೆ.
ಮಂಡ್ಯದ ನಿಂಗಮ್ಮನನ್ನು ಬಾಲಚಂದ್ರ ಮತ್ತು ಲತಾ ಸೇರಿ ಕೊಲೆ ಮಾಡಿದ್ದಾರೆ. ನಿಂಗಮ್ಮ ಮತ್ತು ಇವರ ಸೊಸೆ ಲತಾ
ನಡುವೆ ಹಣಕಾಸು ವ್ಯವಹಾರ ಇತ್ತು. ಇದೇ ವಿಚಾರವಾಗಿ ಜಗಳವಾಗಿದ್ದು, ಜಗಳವಾಡುವಾಗ ನಿಂಗಮ್ಮ ಕೆಳಗೆ ಬಿದ್ದಿದ್ದಾರೆ. ಬಳಿಕ ಬಾಲಚಂದ್ರ ಜತೆ ಸೇರಿ ರೈಲ್ವೆ ಟ್ರಾಕ್ಗೆ ನಿಂಗಮ್ಮನನ್ನು ಹಾಕಿದ್ದು, ರೈಲು ಹರಿದು ನಿಂಗಮ್ಮನ ದೇಹ ಚಿದ್ರ ಚಿದ್ರವಾಗಿದೆ. ನಂತರ ರೈಲ್ವೆ ಟ್ರಾಕ್ನಿಂದ ಮೃತ ನಿಂಗಮ್ಮರ ತಲೆ ಕದ್ದಿದ್ದ ಈ ಅರೋಪಿಗಳು, ಅದನ್ನು ಲಾರಿಯೊಂದರ ಒಳಕ್ಕೆ ಹಾಕಿದ್ದಾರೆ. ಹೀಗಾಗಿ ಗ್ರಾನೈಟ್ ಲಾರಿಯಲ್ಲಿ ಮೃತ ಮಹಿಳೆಯ ತಲೆ ಪತ್ತೆಯಾಗಿದೆ.
ಲಾರಿಯಲ್ಲಿ ತಲೆ ಪತ್ತೆಯಾಗಿದ್ದ ಕಾರಣ ಇಳಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಆದರೆ ರೈಲ್ವೆ ಟ್ರಾಕ್ ಮೇಲೆ ಮೃತ ದೇಹ ಪತ್ತೆಯಾಗಿದ್ದ ಕಾರಣ, ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆಯಲ್ಲಿ ಈ ಪ್ರಕರಣ ದಾಖಲು ಮಾಡಲಾಗಿತ್ತು. ಸದ್ಯ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ.
ಚಾಕುವಿನಿಂದ ಇರಿದು ಆಟೋ ಚಾಲಕನ ಬರ್ಬರ ಹತ್ಯೆ
ಚಾಕುವಿನಿಂದ ಇರಿದು ಆಟೋ ಚಾಲಕನನ್ನು ಕೊಲೆ ಮಾಡಿದ ಘಟನೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ. ಕಲಬುರಗಿಯ ದುಬೈ ಕಾಲೋನಿ ನಿವಾಸಿ ಅನಿಲ್ ಭಜಂತ್ರಿ(24) ಕೊಲೆಯಾದ ಆಟೋ ಚಾಲಕ. 10-15 ಯುವಕರ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಹಳೆ ವೈಷಮ್ಯದಿಂದ ಆಟೋ ಚಾಲಕನ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ
ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಆನೇಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಪೆನ್ನಪಳ್ಳಿಯ ಕಿರಣ್(26) ಬಂಧಿತ ಆರೋಪಿ. ಬಂಧಿತ ಕಿರಣ್ನಿಂದ ಪೊಲೀಸರು 10 ಬೈಕ್ ವಶಕ್ಕೆ ಪಡೆದಿದ್ದಾರೆ. ಆನೇಕಲ್, ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮನಹಳ್ಳಿ ಭಾಗದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ, ಈ ದ್ವಿಚಕ್ರ ವಾಹನಗಳನ್ನು ತಮಿಳುನಾಡಿನಲ್ಲಿ ಮಾರುತ್ತಿದ್ದ. ಕಿರಣ್ ಜತೆಗೆ ಬೈಕ್ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಸಂದೀಪ್ ಮತ್ತು ರಾಜೇಶ್ ತಲೆಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ಅವರಿಬ್ಬರ ಹುಡುಕಾಟದಲ್ಲಿದ್ದಾರೆ.