ಬೆಂಗಳೂರು: ಸೋಮವಾರ ಮಧ್ಯಾಹ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.
ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸುದ್ದಿ ಗೋಷ್ಠಿ ನಡೆಸಿ ಸುರೇಶ್ ಕುಮಾರ್ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಸುದ್ದಿಗೋಷ್ಠಿ ಬಳಿಕ ಇಲಾಖೆ ವೆಬ್ ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಕೊರೊನಾ ಸೋಂಕು ಭೀತಿಯ ನಡುವೆಯೂ ಸರ್ಕಾರವು ಯಶಸ್ವಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು. 8.5 ಲಕ್ಷ ವಿದ್ಯಾರ್ಥಿಗಳಲ್ಲಿ ಸರಾಸರಿ ಶೇ.98 ರಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಮಾಸ್ಕ್ ಗಳನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸುರೇಶ್ ಕುಮಾರ್, ಕರ್ನಾಟಕ ಸರ್ಕಾರ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ನಾನು ಭೇಟಿ ಮಾಡಿದ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಪರೀಕ್ಷೆ ಬೇಕು ಎಂದು ನನ್ನನ್ನು ಆಗ್ರಹಿಸಿದರು. ನಮ್ಮ ಜಿಲ್ಲೆಗಳ ಅಧಿಕಾರಿಗಳು ಎಂತಹ ಸಂದರ್ಭದಲ್ಲಿಯೂ ತಾವು ದೃತಿಗೆಡದೇ ಈ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಆತ್ಮವಿಶ್ವಾಸವನ್ನು ತೋರಿದರು. ಪುನಃ ನಾನು ಬೆಂಗಳೂರಿಗೆ ವಾಪಾಸು ಬಂದು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ನಿಟ್ಟಿನಲ್ಲಿ ಭರವಸೆಯ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಮ್ಮ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದೆ ಎಂದು ಸುರೇಶ್ ಕುಮಾರ್ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಮಜಲುಗಳನ್ನು ವಿವರಿಸಿದ್ದರು.