ಮಡಿಕೇರಿ : ಕೋವಿಡ್ ಅವಧಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡ ನರ್ಸಿಂಗ್ ಸಿಬ್ಬಂದಿಗಳಿಗೆ ತಕ್ಷಣ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ.
ಅನೇಕ ದಿನಗಳಿಂದ ಹೊರ ಗುತ್ತಿಗೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಈ ಸಿಬ್ಬಂದಿಗೆ ಇದುವರೆಗೂ ವೇತನ ನೀಡಿಲ್ಲ ಎಂಬುದನ್ನು ಕೊಡಗು ಜಿಲ್ಲಾ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಂಗಳವಾರ ಈ ಭರವಸೆ ನೀಡಿದರು.
ಹಿರಿಯ ಶಾಸಕ ಕೆ.ಜೆ. ಬೋಪಯ್ಯ ಅವರು ಈ ವಿಷಯ ಗಮನಕ್ಕೆ ತರುತ್ತಿದ್ದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಅನೇಕ ದಿನಗಳಾದರೂ ವೇತನ ನೀಡದ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಿಂದಲೇ ಇಲಾಖೆ ಆಯುಕ್ತ ತ್ರೀಲೋಕಚಂದ್ರ ಹಾಗೂ ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ವೇತನ ಬಿಡುಗಡೆಗೆ ಕ್ರಮ ಜರುಗಿಸುವಂತೆ ಆದೇಶ ನೀಡಿದರು.
ಇನ್ನು ಮುಂದೆ ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ. ಕೆಳ ಹಂತದಲ್ಲಿ ಕಷ್ಟಪಟ್ಟು ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವೇತನ ವಿಳಂಬವಿಲ್ಲದೆ ನೀಡಬೇಕು. ಇಂತಹ ದೂರುಗಳು ಪುನಾರವರ್ತನೆ ಆಗದಂತೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೆಡಿಕಲ್ ಕಾಲೇಜು ಅಧಿಕಾರಿಗಳಿಗೆ ಸೂಚನೆ ನೀಡಿದರು.