ಮಂಗಳೂರು: ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಛತ್ರ, ಹೊಟೇಲ್, ರೆಸಾರ್ಟ್, ಸಭಾಂಗಣಗಳಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಇಂದಿನಿಂದ ಜಿಲ್ಲೆಯಾದ್ಯಂತ ಅವಕಾಶ ಕಲ್ಪಿಸಲಾಗಿದೆ. ಆದರೆ, 40ಕ್ಕಿಂತ ಹೆಚ್ಚು ಜನರು ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ,ವಿ. ಆದೇಶ ನೀಡಿದ್ದಾರೆ.
ಮದುವೆ ನಡೆಸುವವರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು, ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸ್ಥೆಯ ಮುಖ್ಯಾಧಿಕಾರಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು.
ಸಂಬಂಧಪಟ್ಟ ಅಧಿಕಾರಿ 40 ಜನರ ಹೆಸರು ಹೊಂದಿರುವ ಪಾಸ್‌ಗಳನ್ನು ವಿತರಿಸುತ್ತಾರೆ. ಇದನ್ನು ಇತರರಿಗೆ ವರ್ಗಾಯಿಸುವಂತಿಲ್ಲ. ಒಂದು ಸ್ಥಳದಲ್ಲಿ ಒಂದು ಮದುವೆ ಮಾತ್ರ ಆಯೋಜಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಮಾರ್ಗಸೂಚಿ ಉಲ್ಲಂಘಿಸಿದರೆ ಮದುವೆಯ ಆಯೋಜಕರು, ಆ ಸ್ಥಳದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.