ಕೊಪ್ಪಳ: ತಾಲೂಕಿನ ಬಸಾಪುರ ಗ್ರಾಮದಲ್ಲಿ ಮದ್ಯ ವ್ಯಸನಿಯೋರ್ವನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಕೆಡವಿ ಭಾರಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಜರುಗಿದ್ದು, ಸ್ಥಳಕ್ಕೆ ಡಿಎಸ್‌ಪಿ ಹಾಗೂ ಕೊಪ್ಪಳ ತಹಸೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಮುನಿರಾಬಾದ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸುವ ಸಿದ್ದತೆಯಲ್ಲಿದ್ದಾರೆ.
ಕೃತ್ಯ ಎಸಗಿದ ವ್ಯಕ್ತಿಯನ್ನು ಮಹೇಶ ಕಲ್ಯಾಣಪ್ಪ ಓಜಿನಹಳ್ಳಿ ಎಂದು ಗುರುತಿಸಲಾಗಿದ್ದು, ಈತನು ನಿತ್ಯವೂ ಮದ್ಯ ಸೇವಿಸಿ ಊರಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದನು ಎನ್ನುವ ಮಾತು ಕೇಳಿ ಬಂದಿದೆ. ಎಂದಿನಂತೆಯೇ ಬುಧವಾರ ಮದ್ಯ ಸೇವಿಸಿ ಗ್ರಾಮದಲ್ಲಿನ ಗಾಂಧಿ ವೃತ್ತದ ಬಳಿ ಆಗಮಿಸಿದ್ದಾನೆ. ಬಾಯಿ ಮಾಡುತ್ತಲೇ ವೃತ್ತದ ಮೇಲ್ಭಾಗಕ್ಕೆ ತೆರಳಿ ಗಾಂಧಿ ಪ್ರತಿಮೆಯನ್ನು ಹಿಡಿದು ಎಳೆದಾಡಿದ್ದಾನೆ. ಪ್ರತಿಮೆಯಲ್ಲಿ ಗಾಂಧೀಜಿಯ ಕೈಯಲ್ಲಿನ ಬೆತ್ತ (ಊರುಗೋಲು) ಹಗುರವಾಗಿದ್ದರಿಂದ ಅದನ್ನು ಹಿಡಿದು ಎಳೆದಾಡಿದ್ದಾನೆ. ಮದ್ಯ ವ್ಯಸನಿ ಎಳೆದ ರಭಸಕ್ಕೆ ಬೆತ್ತ ಕಿತ್ತು ಬಂದಿದೆ. ಬೆತ್ತ ಕಿತ್ತು ಬೀಳುತ್ತಿದ್ದಂತೆ ಮೂರ್ತಿಯು ಭಾರ ತಾಳದೆ ಕೆಳಗೆ ಮುರಿದು ಬಿದ್ದಿದೆ. ಕೂಡಲೇ ಸ್ಥಳೀಯರು ಈತನ ಕೃತ್ಯ ನೋಡಿ ಆತನನ್ನ ಹಿಡಿದು ಥಳಿಸಿದ್ದಾರೆ. ಪೊಲೀಸ್ ಠಾಣೆ, ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಏಕಾ ಏಕಿ ಗಾಂಧೀಜಿ ಪ್ರತಿಮೆಯನ್ನು ಕೆಡವಿದ ಪ್ರಕರಣ ಊರು ತುಂಬೆಲ್ಲ ಸುದ್ದಿಯಾಗಿ ಏನೋ ವಿವಾದ ಎದ್ದಿದೆ ಎಂದು ಗ್ರಾಮಸ್ಥರು ಗುಸುಗುಸು ಮಾತನಾಡುತ್ತಿದ್ದರು. ಬಳಿಕ ಸ್ಥಳಕ್ಕೆ ಮುನಿರಾಬಾದ್ ಠಾಣೆ ಪಿಎಸ್‌ಐ ಪ್ರಶಾಂತ ಅವರು ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೇ, ಕೃತ್ಯದ ಕುರಿತು ಸ್ಥಳೀಯ ಮುಖಂಡರಿಂದಲೂ ಮಾಹಿತಿ ಪಡೆದಿದ್ದಾರೆ. ಮದ್ಯ ವ್ಯಸನಿಯನ್ನು ಠಾಣೆಯ ಸುಪರ್ಧಿಗೆ ಪಡೆದಿದ್ದಾರೆ.