ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಗೆ 1.25 ಲಕ್ಷದ ಮಣ್ಣಿನ ಹಣತೆಗಳು ತಯಾರಾಗುತ್ತಿವೆ.ಈ ಸಂಬಂಧ ಮಣ್ಣಿನ ಮಡಿಕೆ ತಯಾರಕರು ಮಾತನಾಡಿ, 1.25 ಲಕ್ಷ ಮಣ್ಣಿನ ಹಣತೆಗಳನ್ನು ಮಾಡಿಕೊಡುವಂತೆ ಆರ್ಡರ್ ಬಂದಿದೆ. ಈ ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿವೆ. ಸದ್ಯ ನಾವು ಹಣತೆಗಳನ್ನು ಮಾಡುವ ಬ್ಯುಸಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಇತ್ತ ಭಾನುವಾರ ಸಿಎಂ ಆದಿತ್ಯನಾಥ್ ಭೇಟಿ ನೀಡಲಿದ್ದಾರೆ. ಆದರೆ ಅಯೋಧ್ಯೆ ರಥಯಾತ್ರೆ ನಡೆಸಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಉಪ ಪ್ರಧಾನಿ ಎಲ್‍ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿಗೆ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿಲ್ಲ. ವೇದಿಕೆ ಮೇಲೆ ಅಲಂಕರಿಸುವ ಗಣ್ಯರ ಲಿಸ್ಟ್‍ನಲ್ಲಿ ಇವರಿಬ್ಬರ ಹೆಸರಿಲ್ಲ. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಫೋನ್ ಮೂಲಕ ಆಹ್ವಾನ ನೀಡೋದಾಗಿ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಕೇಂದ್ರದ ಮಾಜಿ ಸಚಿವೆ ಉಮಾಭಾರತಿ, ಮಾಜಿ ಸಿಎಂ ಕಲ್ಯಾಣ್ ಸಿಂಗ್‍ಗೆ ಆಹ್ವಾನ ಹೋಗಿದೆ. ರಾಮಮಂದಿರ ನಿರ್ಮಾಣ ಟ್ರಸ್ಟಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಧನ ಸಂಗ್ರಹಕ್ಕೆ ಕೊಂಕು ನುಡಿದವರಿಗೆ ತಿರುಗೇಟು ನೀಡಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಎದುರಾಗೋ ಸಾಮಾನ್ಯ ಅಂತ ಮಂದಿರ ವಿರೋಧಿಗಳ ಕಿವಿ ಹಿಂಡಿದ್ದಾರೆ. ಇತ್ತ ತುಮಕೂರು ಗ್ರಾಮಾಂತರ ಬಳಿ ಶ್ರೀರಾಮ ಸೃಷ್ಟಿಸಿದ ಎನ್ನಲಾಧ ನಾಮದ ಚಿಲುಮೆಯ ನೀರನ್ನು ಅಯೋಧ್ಯೆಗೆ ಕಳಿಸಿಕೊಡಲಾಗಿದೆ.