Breaking News

ಸಮುದ್ರಕ್ಕಿಳಿದ ಬೋಟುಗಳು ಮರಳಿ ದಡಕ್ಕೆ

Spread the love

ಕಾರವಾರ: ರಾಜ್ಯದ ಕರಾವಳಿಯಲ್ಲಿ ಅಗಸ್ಟ್ ತಿಂಗಳ ಮೊದಲ ದಿನ ಮೀನುಗಾರಿಕೆ ಪ್ರಾರಂಭಕ್ಕೆ ವಿದ್ಯುಕ್ತ ಚಾಲನೆ ಸಿಗುತ್ತದೆ. ಮಳೆಗಾಲದ ಎರಡು ತಿಂಗಳು ಬಂದ್ ಆಗುವ ಮೀನುಗಾರಿಕೆ, ಸರ್ಕಾರದ ಆದೇಶದಂತೆ ಇಂದಿನಿಂದ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಪ್ರತಿ ವರ್ಷ ಅಗಸ್ಟ್ ನಲ್ಲಿ ಮೀನುಗಾರಿಕೆಯನ್ನು ಹಬ್ಬದಂತೆ ಆಚರಿಸುತ್ತಿದ್ದ ಉತ್ತರ ಕನ್ನಡ ಮೀನುಗಾರರ ಸಂಭ್ರಮ ಕಳೆಗುಂದಿದೆ.

ಸರ್ಕಾರದ ಆದೇಶದಂತೆ ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ ಬಳಿಕ ಅಗಸ್ಟ್ 1 ರಿಂದ ಪುನಃ ಪ್ರಾರಂಭ ಮಾಡಲಾಗುತ್ತದೆ. 61 ದಿನಗಳ ಬಳಿಕ ಮೀನುಗಾರಿಕೆ ಪ್ರಾರಂಭವನ್ನು ಮೀನುಗಾರರು ಹಬ್ಬದಂತೆ ಆಚರಣೆ ಮಾಡೋದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಇಂದು ಕರಾವಳಿಯಲ್ಲಿ ಮೀನುಗಾರಿಕೆ ಮತ್ತೆ ಪ್ರಾರಂಭಗೊಂಡಿದ್ದು, ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಲ್ಲಿ ಯಾವುದೇ ಸಂಭ್ರಮಾಚರಣೆ ಕಂಡುಬಂದಿಲ್ಲ.

 

ಬೋಟುಗಳಿಗೆ ಮಾವಿನ ತೋರಣ, ಹೂವಿನ ಹಾರ ಹಾಕಿ ಸಿಂಗರಿಸಿ ಪೂಜೆ ಮಾಡಿ ಖುಷಿಯಿಂದ ಸಮುದ್ರಕ್ಕಿಳಿಯುತ್ತಿದ್ದ ಮೀನುಗಾರರ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿದೆ.ಕಾರವಾರ ತಾಲೂಕಿನ ಬೈತಖೋಲ ಬಂದರಿನಲ್ಲಿ ಮೀನುಗಾರಿಕೆ ಪ್ರಾರಂಭದ ದಿನ ಕಾಣುತ್ತಿದ್ದ ಹಬ್ಬದ ಸಂಭ್ರಮ ಈ ಬಾರಿ ಕಾಣೆಯಾಗಿದೆ. ಕೆಲವೇ ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳುತ್ತಿದ್ದು, ಸಾಕಷ್ಟು ಬೋಟುಗಳು ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ. ಕೊರೊನಾ ಅಟ್ಟಹಾಸ ಹಿನ್ನೆಲೆ ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು, ಇನ್ನೂ ಮರಳಿಲ್ಲ. ಹೀಗಾಗಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ ಕಾರ್ಮಿಕರೇ ಇಲ್ಲದಂತಾಗಿದ್ದು, ಸ್ಥಳೀಯರು ಕೆಲವೇ ಬೋಟುಗಳನ್ನು ಮೀನುಗಾರಿಕೆಗೆ ಕೊಂಡೊಯ್ದಿದ್ದಾರೆ.

ಸಮುದ್ರಕ್ಕಿಳಿದ ಬೋಟುಗಳು ಮರಳಿ ದಡಕ್ಕೆ
ಕಾರವಾರ ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಇಂದು ಬೆಳಗ್ಗೆ ಸುಮಾರು 50 ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಆದರೆ ಇಡೀ ದಿನ ಸಮುದ್ರದಲ್ಲಿ ಶ್ರಮಿಸಿದರೂ ಕೆಲವು ದೋಣಿಗಳಿಗೆ ಮಾತ್ರ ಒಂದೆರಡು ಬುಟ್ಟಿಗಳಷ್ಟೇ ಸೆಟ್ಲೆ (ಸೀಗಡಿ) ಮೀನುಗಳು ಸಿಕ್ಕಿವೆ. ಮುದಗಾ ಬಂದರಿನಿಂದಲೂ ಸುಮಾರು 60 ದೋಣಿಗಳು ಸಮುದ್ರಕ್ಕೆ ತೆರಳಿದ್ದವು. ಅವೂ ಖಾಲಿಯಾಗಿಯೇ ಬಂದರಿಗೆ ಮರಳಿವೆ.

ಇಂದು ಅಂದಾಜು ಒಂದು ಕ್ವಿಂಟಲ್ ಮಾತ್ರ ಮೀನು ಸಿಕ್ಕಿವೆ. ದೋಣಿಗಳಿಗೆ ದಿನವೊಂದಕ್ಕೆ 70ರಿಂದ 80 ಲೀಟರ್‍ಗಳಷ್ಟು ಡೀಸೆಲ್ ಬೇಕು. ಮೀನು ವ್ಯಾಪಾರಿಗಳು ಸೆಟ್ಲೆಯನ್ನು ಕೆ.ಜಿ.ಗೆ 105ರೂ.ಗೆ ಖರೀದಿಸುವುದಾಗಿ ಹೇಳಿದ್ದಾರೆ. ಕಾರ್ಮಿಕರ ವೇತನ, ನಿತ್ಯದ ಆದಾಯವನ್ನೆಲ್ಲ ಒಟ್ಟುಗೂಡಿಸಿದರೆ ಮೊದಲ ದಿನ ನಷ್ಟವೇ ಆಗಿದೆ. ಈ ಅಂದಾಜಿನ ಪ್ರಕಾರ ದೋಣಿಗಳ ಡೀಸೆಲ್ ಖರ್ಚೂ ಸಿಗುವುದಿಲ್ಲ ಎಂದು ಮೀನುಗಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ರೈತರ ಜೀವನಾಡಿ ಮಲಪ್ರಭಾ ಜಲಾಶಯ ಭರ್ತಿಗೆ ಇನ್ನು 5 ಟಿಎಂಸಿ ಬಾಕಿ

Spread the loveನರಗುಂದ(ಆ.17): ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿ ಮಲಪ್ರಭಾ ಜಲಾಶಯ ಭರ್ತಿಯಾಗುತ್ತಿದ್ದು, ಈ ಭಾಗದ ರೈತರಿಗೆ ಹರ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ