ಬನಹಟ್ಟಿ : ಮಹಾಮಾರಿ ಕೋವಿಡ್‌ನಿಂದಾಗಿ ಪ್ರತಿ ನಿತ್ಯ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಮುಸ್ಲಿಂ ಯುವಕರು ಜಾತ್ಯತೀತ ಭಾವನೆಯಿಂದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ರಬಕವಿಯ ಅಂಜುಮನ್ ಇಸ್ಲಾಂ ಮುಸ್ಲಿಂ ಜಮಾತನ ಮುಖಂಡರ ಚಿಂತನೆ ಮೂಲಕ ಯುವಕರ ತಂಡ ರಚನೆ ಮಾಡಿ, ಅಂತ್ಯಸಂಸ್ಕಾರ ಮಾಡಲು ಸಜ್ಜಾಗಿದ್ದಾರೆ. ಯಾವುದೇ ಜಾತಿ ಭೇದ ನೋಡದೆ, ಅವರ ಪದ್ದತಿಯ ಅನುಸಾರ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಕೋವಿಡ್‌ಗೆ ಬಲಿಯಾಗಿ ಮೃತಪಟ್ಟ ವ್ಯಕ್ತಿಯನ್ನು ಮುಟ್ಟೋಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಮೃತ ವ್ಯಕ್ತಿಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವುದರ ಮುಖಾಂತರ ತಮ್ಮನ್ನು ತಾವು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೊರೊನಾದಿಂದ ಮೃತ ಪಟ್ಟವರ ಅಂತ್ಯ ಸಂಸ್ಕಾರ ಮಾಡುವಾಗ ಬೀಸಾಡುವುದನ್ನು ನೋಡಿ, ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ಅಂಜುಮನ್ ಕಮಿಟಿಯ ಮೌಲಾನಾ ಅವರ ಮಾತಿನಂತೆ ಅಂತ್ಯಸಂಸ್ಕಾರಮಾಡಲು ಮುಂದಾಗಿದ್ದಾರೆ. ಇಡೀ ತಾಲೂಕಿನಲ್ಲಿ ಎಲ್ಲೇ ಸಾವಾದರೂ ಹೋಗಿ ಯಾವುದೇ ಫಲಾಪೇಕ್ಷ ಇಲ್ಲದೇ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ರಬಕವಿ ಮುಸ್ಲಿಂ ಸಮಾಜದ ಮೌಲಾನಾ ಮೋಸಿನ ಗೋಕಾಕ್, ಅಸ್ಲಾಂ ಕಿಲ್ಲೇದಾರ, ಅಬೂಬಕ್ಕರ್ ಬಂಡೇಬುರುಜ, ಇಸ್ಮೈಲ್ ನಮಾಜಕಟ್ಟಿ, ಆಶ್ರಫ್ ಗೋಕಾಕ್, ಮೋಸಿನ ಅತ್ತಾರ, ಯಾಸೀನ ಅತ್ತಾರ, ಆಫ್ಜಲ್ ಅತ್ತಾರ, ಜಮೀಲ್ ಪನಿಬಂದ, ವಾಜಿದ್ ಲೇಂಗ್ರೆ, ಜುಬೇರ್ ನಾಲಬಂದ, ಮುಜೀಬ್ ಅತ್ತಾರ, ಆರೀಫ್ ಬಂಡೇಬುರುಜ, ಮೊಯೀನ್ ಗುರಾಡಿ, ಮುಬಾರಕ್ ಮಿರ್ಜಿ ಸೇರಿದಂತೆ ಮುಂತಾದ ಯುವಕರು ಸೇರಿ ಇಂತಹ ಕಾರ್ಯದಲ್ಲಿ ತೊಡಗಿದ್ದು ಇವರ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದೆಲ್ಲೆಡೆ ಕೋವಿಡ್ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಮ್ಮ ಸಹೋದರರು ಮಾನವೀಯತೆಯಿಂದ ಯಾವುದೇ ಜಾತಿ ಮತ ಪಂಥವನ್ನು ನೋಡದೆ ಕಾರ್ಯವನ್ನು ಮಾಡುತ್ತಿದ್ದು ಇಲ್ಲಿ ಯಾವುದೇ ಹಣವನ್ನು ತೆಗೆದುಕೊಳ್ಳುತ್ತಿಲ್ಲ. ಈ ಸೇವೆ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ತುಂಬಾ ಹೆಮ್ಮೆಯ ಸಂಗತಿ.
– ಮೌಲಾನಾ ಮೋಸಿನ್ ಗೋಕಾಕ ಮುಖಂಡರು
ರಬಕವಿಯ ಅಂಜುಮನ್ ಇಸ್ಲಾಂ ಮುಸ್ಲಿಂ ಜಮಾತ ಹಾಗೂ ಪಾಪ್ಯೂಲರ ಫ್ರಂಟ್ ಆಫ್ ಇಂಡಿಯಾ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮೆಲ್ಲ ಯುವಕರು ಈ ಕಾರ್ಯವನ್ನು ಮಾಡುತ್ತಿದ್ದು ಇದುವರೆಗೆ ೭ಕ್ಕೂ ಹೆಚ್ಚು ಅಂತ್ಯಕ್ರಿಯೆಯನ್ನು ಸರಕಾರಿ ಮಾರ್ಗಸೂಚಿಯಂತೆ ನೆರವೇರಿಸಿದ್ದೇವೆ. ಇದರಲ್ಲಿ ನಮ್ಮದು ಯಾವುದೇ ಫಲಾಪೇಕ್ಷೆ ಇರುವುದಿಲ್ಲ. ಒಟ್ಟಾರೆ ಅವರ ಧರ್ಮಗಳನುಸಾರ ಪಿಪಿಎ ಕಿಟ್ ಧರಸಿ ಅಂತ್ಯಕ್ರಿಯೆ ಮಾಡುತ್ತೇವೆ.
– ಅಸ್ಲಂ ಶಿಲ್ಲೇದಾರ ಅಂತ್ಯ ಸಂಸ್ಕಾರ ತಂಡದ ಸದಸ್ಯರು
Laxmi News 24×7