ಬೆಂಗಳೂರು,ಜು.27-ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ಪುನರುಚ್ಚರಿಸಿದ್ದಾರೆ.
ಇನ್ನು ಮುಂದೆ ಲಾಕ್‍ಡೌನ್ ಕುರಿತಂತೆ ನಾನು ಚರ್ಚೆಯನ್ನೇ ಮಾಡುವುದಿಲ್ಲ. ಈಗಾಗಲೇ 45 ದಿನ ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಪುನಃ ಅದರ ಬಗ್ಗೆ ಚರ್ಚೆಯೇ ಅಪ್ರಸ್ತುತ ಎಂದರು.
ರಾಜ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಾವು ಆರ್ಥಿಕ ಸುಧಾರಣೆಗೆ ಒತ್ತು ಕೊಡಬೇಕು. ಕೊರೊನಾ ನಿಯಂತ್ರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಜೊತೆಗೆ ಸಾರ್ವಜನಿಕರು ನಮಗೆ ಸಹಕಾರ ಕೊಡಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಕೊರೊನಾ ಒಮ್ಮಿಂದೊಮ್ಮೆಗೆ ನಿಯಂತ್ರಣಕ್ಕೆ ಬರುತ್ತದೆ ಎಂಬ ಖಾತ್ರಿ ಇಲ್ಲ.ಹೀಗಾಗಿ ಕೊರೊನಾ ಜೊತೆಯೇ ನಾವು ಬದುಕಬೇಕಾದ ಅನಿವಾರ್ಯತೆ ಇದೆ. ಆರ್ಥಿಕ ಸುಧಾರಣೆಗೆ ಒತ್ತು ಕೊಡಬೇಕಾಗಿರುವುದರಿಂದ ಮತ್ತೆ ಲಾಕ್‍ಡೌನ್ ಜಾರಿ ಮಾಡುವುದಿಲ್ಲ ಎಂದು ಬಿಎಸ್‍ವೈ ಸ್ಪಷ್ಟಪಡಿಸಿದರು.